ಹಂಸಭಾವಿ 9 ವರ್ಷದ ಬಾಲಕನಲ್ಲಿ ಜಿಬಿಎ ಪತ್ತೆ ! ದಾವಣಗೆರೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

 hamsabavi, gbs,
hamsabavi, gbs,
Published on
ಹಾವೇರಿ/ ಹಂಸಭಾವಿ: ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದ 9 ವರ್ಷದ ಬಾಲಕನಲ್ಲಿ ಅಪರೂಪದ ನರ ಸಂಬಂಧಿತ ಕಾಯಿಲೆ ಗಿಲೆನ್-ಬಾರಿ ಸಿಂಡ್ರೋಮ್ (ಜಿಬಿಎಸ್) ಕಾಣಿಸಿಕೊಂಡಿದ್ದು, ಈ ಮೂಲಕ ಜಿಲ್ಲೆಗೆ ವಿಚಿತ್ರ ಕಾಯಿಲೆ ಕಾಲಿಟ್ಟಿದೆ. ಇದು ಜನರಲ್ಲಿ ಸೋಂಕಿನ ಭೀತಿ ಹೆಚ್ಚಳ ಮಾಡಿದೆ.
ಹಂಸಭಾವಿಯ 9 ವರ್ಷದ ಬಾಲಕನಿಗೆ 12 ದಿನಗಳ ಹಿಂದೆ ಲಕ್ಷಣಗಳು ಕಾಣಿಸಿಕೊಂಡಿದ್ದವು. ಮನೆಯಲ್ಲಿ ಮಲಗಿದ್ದ ಬಾಲಕ ಬೆಳಗ್ಗೆ ಮೇಲೆ ಏಳಲು ಆಗದಷ್ಟು ಸುಸ್ತು, ತಲೆನೋವು ಕಾಣಿಸಿಕೊಂಡಿತ್ತು. ಕೈ-ಕಾಲುಗಳಲ್ಲಿ ಸ್ವಾದೀನ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ, ಪಾಲಕರು ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ, ಹಾವೇರಿ ನಗರದ ಖಾಸಗಿ ಮಕ್ಕಳ ತಜ್ಞರಲ್ಲಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರ ಸೂಚನೆ ಮೇರೆಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಬಳಿಕ ವೈದ್ಯರು ಇದು ಜಿಬಿಎಸ್ ಕಾಯಿಲೆ ಎಂದು ದೃಢಪಡಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.
ವೈದ್ಯರ ಮಾಹಿತಿ ಪ್ರಕಾರ ಈ ಕಾಯಿಲೆ ದೇಹದ ರೋಗ ನಿರೋಧಕ ವ್ಯವಸ್ಥೆ ಹಾಗೂ ನರಗಳನ್ನು ಹಾನಿಗೊಳಿಸುವ ಅಪರೂಪ ಕಾಯಿಲೆಯಾಗಿದ್ದು, ನರ ಸಂಬಂಧಿ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷೃ ಮಾಡದೇ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ವಾರದೊಳಗೆ ಮಗನ ಚಿಕಿತ್ಸೆಗೆ 3.5 ಲಕ್ಷ ರೂ. ಖರ್ಚಾಗಿದೆ. ನಂತರ ದಾವಣೆಗೆರೆಯ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ನಮಗೆ ಆಯುಷ್ಮಾನ್ ಕಾರ್ಡ್ ಮಾಡಿಸಿ, ಚಿಕಿತ್ಸೆಗೆ ಸಹಕರಿಸಿದ್ದಾರೆ ಎಂದು ಬಾಲಕನ ತಂದೆ ತಿಳಿಸಿದ್ದಾರೆ.
ಟಿಎಚ್‌ಒಗೆ ವಿಷಯ ಗೊತ್ತಿಲ್ಲ ?
ಸ್ಥಳೀಯ ಹಿರೇಕೆರೂರ ತಾಲೂಕು ಆರೋಗ್ಯಾಧಿಕಾರಿ ಡಾ.ಮಕಾಂದಾರ ಅವರಿಗೆ ರೋಗಿಯ ಸಂಬಂಧಿಗಳು ವಿಷಯ ತಿಳಿಸಿದ್ದಾರೆ. ಚಿಕಿತ್ಸೆ ವೆಚ್ಚ ದುಬಾರಿ ಆದ್ದರಿಂದ ಬಾಲಕನಿಗೆ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಡಲು ತಿಳಿಸಿದ್ದಾರೆ. ಆದರೂ, ಅವರು ನಿರ್ಲಕ್ಷೃ ತೋರಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಈ ಆರೋಪದ ಕುರಿತು ‘ವಿಜಯವಾಣಿ’ ಟಿಎಚ್‌ಒ ಅವರನ್ನು ಕೇಳಿದಾಗ ತಾಲೂಕಿನಲ್ಲಿ ಈ ಕಾಯಿಲೆ ಯಾರಲ್ಲೂ ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಡಿಎಚ್‌ಒ ಡಾ.ಎಂ.ಜಯಾನಂದ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಜಿಬಿಎಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಈ ರೋಗಕ್ಕೆ ತುತ್ತಾದಲ್ಲಿ ದೇಹದ ನರಮಂಡಲ ಘಾಸಿಗೊಳಿಸುತ್ತದೆ. ಕೈಕಾಲು ಜೋಮುಗಟ್ಟುವುದು, ಅತಿಯಾದ ಸುಸ್ತು, ಶಕ್ತಿ ಕುಂದುತ್ತದೆ. ಉಸಿರಾಟದ ತೊಂದರೆ ಆಗುತ್ತದೆ. ಆರಂಭದಲ್ಲೇ ರೋಗದ ಲಕ್ಷಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ಕೊಡಿಸಿದರೆ, ವಾಸಿ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net