ಹಾವೇರಿ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿ, ಸೇವಾ ಭದ್ರತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು.9ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಜಿಲ್ಲೆಯ ಗ್ರಾಪಂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನೇಖಾನ್ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ಮೂಲಕ ಮನವಿ ಮಾಡಿದರು.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರು ಕಡಿಮೆ ಸಂಬಳಕ್ಕೋಸ್ಕರ ದುಡಿಯುತ್ತಿದ್ದಾರೆ. ದಿನ ಕಳೆದಂತೆ ಅಗತ್ಯ ವಸ್ತುಗಳು ಬೆಲೆ ಏರಿಕೆಯಾಗುತ್ತಿದ್ದು, ಗ್ರಾಪಂಗಳಲ್ಲಿ ಕೆಲಸ ಮಾಡುವ ನೌಕರರ ಕುಟುಂಬಗಳು ಸಂಕಷ್ಟದಲ್ಲಿವೆ. ಆಳುವ ಸರ್ಕಾರಗಳು ನೌಕರರನ್ನು ಹಗಲಿರುಳು ದುಡಿಸಿಕೊಳ್ಳುತ್ತಿವೆ. ಕೆಲಸಕ್ಕೆ ತಕ್ಕಂತೆ ಕನಿಷ್ಠ ವೇತನ ಹಾಗೂ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕಳೆದ ಮೇ.22ರಂದು ಹೊರಡಿಸಿದ ಅಧಿಸೂಚನೆಯಂತೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಇದು ಕೇವಲ ಕಾಗದದಲ್ಲಿ ಮಾತ್ರ ಇದೆಯೇ ಹೊರತು ಅನುಷ್ಠಾನಕ್ಕೆ ಬರುತ್ತಿಲ್ಲ. ಆದ್ದರಿಂದ ಗ್ರಾಪಂ ನೌಕರರು ಕಾಲಕಾಲಕ್ಕೆ ಪರಿಷ್ಕೃತ ಕನಿಷ್ಠ ವೇತನ, ಸೇವಾಭದ್ರತೆ, 6 ಲಕ್ಷ ರೂ. ಇಡಿಗಂಟು, ಪಿಂಚಣಿ ವ್ಯವಸ್ಥೆ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ಬೇಡಿಕೆಗಳನ್ನು ಇಟ್ಟುಕೊಂಡು ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಗ್ರಾಪಂ ನೌಕರರು ಆಗಮಿಸಬೇಕು ಎಂದು ಕೋರಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಪಂ ಸ್ವಚ್ಛತಾಗಾರರು, ಬಿಲ್ ಕಲೆಕ್ಟರ್‌ಗಳು, ಕಂಪ್ಯೂಟರ್ ಆಪರೇಟರ್‌ಗಳು, ವಾಟರ್‌ಮೆನ್‌ಗಳು ಸೇರಿ 1,600ಕ್ಕೂ ಹೆಚ್ಚು ನೌಕರರು ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಐ. ಈಳಗೇರ, ಜಿಲ್ಲಾಧ್ಯಕ್ಷ ಅಂದಾನೆಪ್ಪ ಹೆಬಸೂರ, ಜಿಲ್ಲಾ ಖಜಾಂಚಿ ಸುಭಾಷ ಸೊಟ್ಟಪ್ಪನವರ, ಮಂಜು ಮಾಳಮ್ಮನವರ, ನಾಗರಾಜ ನಾಯಕ್, ಸುಭಾಷ್ ಹೊಟ್ಟೆಪ್ಪನವರ, ಹೇಮಂತ ಲಮಾಣಿ, ಜಗದೀಶ ಪೂಜಾರ, ಆದಂ, ನೇತ್ರಾ, ಅನಿತಾ, ಇತರರಿದ್ದರು.