ಹಾವೇರಿ: ಕೇಂದ್ರ ಸರ್ಕಾರ ನಿವೃತ್ತ ಸರ್ಕಾರಿ ನೌಕರರಿಗೆ ವಾರ್ಷಿಕ ತುಟ್ಟಿಭತ್ಯೆ ನೀಡದಿರಲು ಹಾಗೂ ವೇತನ ಪರಿಷ್ಕರಣೆ ಮಾಡದಿರಲು ಕೈಗೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಕೂಡಲೇ ಈ ತಿದ್ದುಪಡಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.
ನಗರದ ಹೊರವಲಯ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸಂಘದ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಪಿಂಚಣಿ ಪರಿಷ್ಕರಣೆ ಮಾಡಲು ಹಾಗೂ ವಾರ್ಷಿಕವಾಗಿ ನೀಡುತ್ತಿದ್ದ ಎರಡು ತುಟ್ಟಿ ಭತ್ಯೆಯನ್ನು ನೀಡದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರಿಂದ ಲಕ್ಷಾಂತರ ನಿವೃತ್ತ ನೌಕರರಿಗೆ ಆರ್ಥಿಕ ಸಮಸ್ಯೆ ಎದುರಾಗಲಿದೆ. ಹಾಗಾಗಿ, ಈ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ.ಅಣ್ಣಿಗೇರಿ, ಕಾರ್ಯದರ್ಶಿ ಎ.ಕೆ.ತಿಮ್ಮಾಪುರ, ಸದಸ್ಯರಾದ ಸಿ.ಎಸ್.ಮಾಳಗಿ, ಶಂಕರ ಸುತಾರ, ಜಿ.ಎಸ್.ಬೋರಗಿ, ಅಶೋಕ ಯತ್ತಿನಹಳ್ಳಿ, ಎಚ್.ಎ.ಜಮಖಾನೆ, ಪಿ.ಬಿ.ಬಾವನೂರು, ಸೈಯದ್ ಅಹ್ಮದ್, ಇತರರಿದ್ದರು.