ಹಾವೇರಿ:ಪಿ.ಎಂ ಪೋಷಣ್ ಯೋಜನೆಯಡಿ ಶಾಲೆಗಳ ಬಿಸಿಯೂಟ ತಯಾರಿಕೆಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಲ್ಜೀತ್‌ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ. ಪಿ.ಎಂ ಪೋಷಣ್ ಶಕ್ತಿ ನಿರ್ಮಾಣ (ಮಧ್ಯಾಹ್ನ ಉಪಹಾರ ಯೋಜನೆ) ಯೋಜನೆಯು ಸರ್ಕಾರದ ಪ್ರತಿಷ್ಠಿತ ಮಹಾತ್ಮಕಾಂಕ್ಷಿ ಯೋಜನೆಯಾಗಿದೆ. ಇದಕ್ಕೆ ನಿರಂತರವಾಗಿ ಸಿಲಿಂಡರ್‌ಗಳ ಪೂರೈಕೆಯ ಅಗತ್ಯವಿರುತ್ತದೆ.
ಜೂನ್ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಬಿಸಿಯೂಟ ಯೋಜನಗೆ ತೊಂದರೆ ಅಗದಂತೆ ಇದನ್ನು ಅಗತ್ಯ ವಸ್ತು ಕಾಯ್ದೆಯಡಿ ಪರಿಗಣಿಸಿ ಶಾಲೆಗಳಿಗೆ ಅಗತ್ಯವಾದ ಇಂಧನವನ್ನು ಅದ್ಯತೆಯ ಮೇರೆಗೆ ಪೂರೈಸುವಂತೆ ನಿರ್ದೇಶನ ನೀಡುವಂತೆ ಕೋರಿದರು.
ಶಾಲೆಗಳಿಗೆ ಎಲ್‌ಪಿಜಿ ಪೂರೈಕೆಗೆ ಒಟಿಪಿ ಹಾಗೂ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯಿಂದ ವಿನಾಯ್ತಿ ನೀಡಬೇಕು. ಬುಕ್ ಮಾಡಿದ ದಿನವೇ ಸಿಲಿಂಡರ್ ಪೂರೈಸಬೇಕು. ಸರ್ಕಾರ ನಿಗಧಿಪಡಿಸಿದ ಮೊತ್ತವನ್ನು ಚೆಕ್‌ಗಳ ಮೂಲಕ ಪಡೆಯಲು ಏಜೆನ್ಸಿಗಳಿಗೆ ನಿದೇಶನ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಪಾಟೀಲ, ಎಂ.ಎಚ್.ಚೂರಿ, ಜಿ.ಬಿ.ಭಜಂತ್ರಿ, ಇತರರಿದ್ದರು.