ಯೋಗದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ದಿ; ಗಾಯತ್ರಿ ಯೋಗ ಕೇಂದ್ರದ ಯೋಗ ಶಿಕ್ಷಕ ಸುಂದರ ಕುಲಕರ್ಣಿ

Haveri, Gayatri, Yoga Kendra, Yoga Day,
Haveri, Gayatri, Yoga Kendra, Yoga Day,
Published on
ಹಾವೇರಿ: ಮಾನವ ಕುಲಕ್ಕೆ ಭಗವಂತ ನೀಡಿದ ಅತ್ಯುನ್ನತ ಕೊಡುಗೆ ಯೋಗ. ಇಂದಿನ ಒತ್ತಡ ಜೀವನಕ್ಕೆ ಪ್ರತಿಯೊಬ್ಬರಿಗೂ ಯೋಗ ಅತ್ಯವಶ್ಯಕವಾಗಿದೆ. ಯೋಗದಿಂದ ದೈಹಿಕ, ಮಾನಸಿಕ ಶಾಂತಿ ಸಾಧ್ಯ ಎಂದು ಯೋಗ ಶಿಕ್ಷಕ ಸುಂದರ ಕುಲಕರ್ಣಿ ತಿಳಿಸಿದರು.
ನಗರದ ಗಾಯತ್ರಿ ಯೋಗ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 12ನೇ ಯೋಗ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿದಿನ ವೈಯಕ್ತಿಕ ಆರೋಗ್ಯಕ್ಕಾಗಿ ಒಂದು ಗಂಟೆ ಮೀಸಲಿಡುವುದು ಅಗತ್ಯವಾಗಿದೆ. ಯೋಗ ಮಾಡಿ ನಿರೋಗಿಯಾಗಿ, ಆರೋಗ್ಯವೇ ಮಹಾಭಾಗ್ಯ, ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಿಮೀತವಾಗದೇ ಪ್ರತಿದಿನವೂ ಯೋಗ ಮಾಡಿ ಆರೋಗ್ಯ ಸಂಪಾದಿಸಿ. ಇಂದಿನ ದಿನದಲ್ಲಿ ಹಣಕ್ಕಿಂತ ಆರೋಗ್ಯ ಮುಖ್ಯ. ಆರೋಗ್ಯದಿಂದ ಇದ್ದರೆ ಎಲ್ಲವನ್ನೂ ಸಂಪಾದಿಸಬಹುದು. ಆರೋಗ್ಯ ಇಲ್ಲದಿದ್ದರೆ ಏನನ್ನೂ ಸಂಪಾದಿಸಲು ಅಸಾಧ್ಯ ಎಂದರು.
ಯೋಗಪಟು ರುಕ್ಸಾನಾ ಮಾತನಾಡಿ, ನನ್ನ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಕಳೆದ ಎರಡು ವರ್ಷಗಳಿಂದ ಪ್ರತಿದಿನ ಯೋಗ ಮಾಡುತ್ತಿದ್ದು, ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿದ್ದೇನೆ ಎಂದರು.
ಮತ್ತೊಬ್ಬ ಯೋಗಪಟು ಗೌರಮ್ಮ ಮಾತನಾಡಿ, ಯೋಗ ಮತ್ತು ಪ್ರಾಣಾಯಾಮಗಳು ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ನಿಯಮಿತವಾಗಿ ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದರಿಂದ ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಉತ್ತಮಗೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಾದೇವಿ ಕೆ., ವಿಜಯಾ ಎಂ.ವಿ., ತೇಜಸ್ವಿನಿ ಆರ್., ಶೀತಲ್ ಕುರ್ಡೇಕರ, ಅನಿತಾ ಪಾಟೀಲ, ಗಾಯತ್ರಿ, ಮತ್ತಿತರರು ಉಪಸ್ಥಿತರಿದ್ದರು.
ನಿರ್ಮಲಾ ಹಾಗೂ ಗೀತಾ ಪ್ರಾರ್ಥಿಸಿದರು. ಭಾರತಿ ಸ್ವಾಗತಿಸಿದರು. ಪ್ರಶಾಂತ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net