ಹಾವೇರಿ: ನಗರದ ಗುತ್ತಲ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆಬದಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ 3,17,400 ರೂ. ಮೌಲ್ಯದ 7.93 ಕೆಜಿ ಗಾಂಜಾ, 3,370 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಸವಣೂರ ಅಂಬೇಡ್ಕರ್ ನಗರ ನಿವಾಸಿ ಲೋಹಿತ ಕೃಷ್ಣಪ್ಪ ಮುನಿಯಪ್ಪನವರ (23), ಮಹೇಶ ಅಶೋಕ ಮೈಲಮ್ಮನವರ (23) ಹಾಗೂ ಸವಣೂರ ಹಾವಣಗಿ ಪ್ಲಾಟ್‌ನ ಮನೋಜ ಕರಿಯಪ್ಪ ಚಾರಿ (21) ಬಂಧಿತ ಆರೋಪಿಗಳು.
ಆರೋಪಿತರು ಎಲ್ಲಿಂದಲೋ ಗಾಂಜಾ ತಂದು ಪಾಕೆಟ್‌ಗಳಲ್ಲಿ ತುಂಬಿ ಗ್ರಾಹಕರನ್ನು ಹುಡುಕಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಶಹರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಎಸ್‌ಪಿ ಯಶೋಧಾ ವಂಟಗೋಡಿ ಮಾರ್ಗದರ್ಶನದಲ್ಲಿ ಎಎಸ್‌ಪಿ ಎಲ್.ವೈ.ಶಿರಕೋಳ ಹಾಗೂ ಡಿವೈಎಸ್‌ಪಿ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಹಾವೇರಿ ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ. ಈ ತಂಡದ ಕಾರ್ಯ ಶ್ಲಾಘಿಸಿರುವ ಎಸ್‌ಪಿ, ತಂಡಕ್ಕೆ ವಿಶೇಷ ಬಹುಮಾನ ಘೋಷಿಸಿದ್ದಾರೆ.
21 ವರ್ಷದ ಯುವಕರು
ಪೇಟಿಂಗ್ ಹಾಗೂ ಕೂಲಿ ಮಾಡುತ್ತಿದ್ದ 21ರಿಂದ 23 ವರ್ಷದ ಮೂವರು ಯುವಕರು ಗಾಂಜಾ ಮಾರಾಟ ಮಾಡುವಾಗ ಮೊದಲ ಬಾರಿಗೆ ಬಂಧನಕ್ಕೆ ಒಳಗಾಗಿದ್ದಾರೆ. ಓಡಿಶಾದಿಂದ ಹಾವೇರಿಗೆ ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.