ಸೋಯಾಬೀನ್ ಬೀಜಕ್ಕಾಗಿ ರೈತರ ಪ್ರತಿಭಟನೆ; ಬೀಜ ನಿಗಮದಿಂದ ಉಚಿತ ಬೀಜ ವಿತರಣೆ

Haveri, Farmers, Protest, for Soyabeen, Free, Seeds,
Haveri, Farmers, Protest, for Soyabeen, Free, Seeds,
Published on
ಹಾವೇರಿ: ನಗರದ ಹಾನಗಲ್ಲ ರಸ್ತೆಯ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ಜಿಲ್ಲಾ ಕಚೇರಿ ಎದುರು ಸಮರ್ಪಕವಾಗಿ ಉಚಿತವಾಗಿ ಸೋಯಾಬೀನ್ ವಿತರಣೆಗೆ ಆಗ್ರಹಿಸಿ ಮಂಗಳವಾರ ರೈತರು ಪ್ರತಿಭಟಿಸಿದರು.
ಒಕ್ಕೂಟದಿಂದ ಸೋಮವಾರದಿಂದ ಉಚಿತವಾಗಿ ಸೋಯಾಬೀನ್ ಬೀಜ ವಿತರಣೆ ಆರಂಭಿಸಲಾಗಿತ್ತು. ವಿಷಯ ತಿಳಿದ ನೂರಾರು ರೈತರು ವಿತರಣಾ ಕೇಂದ್ರದತ್ತ ಧಾವಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ರೈತರು ಧಾವಿಸಿದ್ದರಿಂದ ಬೀಜ ವಿತರಣೆಗೆ ಅಡಚಣೆಯಾಗಿತ್ತು. ಎಲ್ಲರಿಗೂ ವಿತರಿಸುವುದು ಅನುಮಾನವಿತ್ತು. ಹಾಗಾಗಿ, ಕೇಂದ್ರದ ಸಿಬ್ಬಂದಿ ಸಂಜೆಯೇ ನೆರೆದಿದ್ದ ರೈತರಿಂದ ಆಧಾರ್ ಕಾರ್ಡ್, ಉತಾರ ಪಡೆದು ಸರತಿಯಲ್ಲಿ ನಿಲ್ಲುವಂತೆ ಸೂಚಿಸಿದ್ದರು. ಮಧ್ಯರಾತ್ರಿವರೆಗೆ ಸರತಿಯಲ್ಲಿದ್ದ ರೈತರಿಗೆ ಬೀಜ ವಿತರಿಸಿದ್ದರು.
ಮಂಗಳವಾರ ಬೆಳಗ್ಗೆ ನೂರಾರು ರೈತರು ಬೀಜ ವಿತರಣಾ ಕೇಂದ್ರದತ್ತ ಬಂದಿದ್ದರು. ಆದರೆ, ದಾಸ್ತಾನು ಕಡಿಮೆ ಇದ್ದ ಕಾರಣ ವಿತರಿಸಲು ಸಿಬ್ಬಂದಿ ಹಿಂಜರಿದರು. ಈ ವೇಳೆ ಬೀಜ ವಿತರಣೆಗೆ ಆಗ್ರಹಿಸಿ ರೈತರು ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ಸರತಿಯಲ್ಲಿದ್ದ ಎಲ್ಲರಿಗೂ ಬೀಜ ವಿತರಿಸಲು ಆಗ್ರಹಿಸಿದರು. ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ, ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ, ಪಿಎಸ್‌ಐ ರವಿಕುಮಾರ, ಎಪಿಎಂಸಿ ಹಾಗೂ ಬೀಜ ನಿಗಮದ ಅಧಿಕಾರಿಗಳು ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು. ಎಲ್ಲರಿಗೂ ಬೀಜ ವಿತರಿಸಲು ರೈತರು ಪಟ್ಟು ಹಿಡಿದರು. ಆಧಾರ್ ಕಾರ್ಡ್, ಉತಾರ ಸಂಗ್ರಹಿಸಿ ಗೋದಾಮಿನಲ್ಲಿ ಎಷ್ಟು ದಾಸ್ತಾನು ಇದೆಯೋ ಅಷ್ಟು ಮಾತ್ರ ವಿತರಿಸಲಾಗುವುದು ಎಂದು ರೈತರನ್ನು ಒಪ್ಪಿಸಿದರು. ಮಧ್ಯಾಹ್ನದ ನಂತರ ಬೀಜ ವಿತರಣೆ ಆರಂಭಿಸಲಾಯಿತು. 400ಕ್ಕೂ ಅಧಿಕ ಚೀಲ ಸೋಯಾಬೀನ್ ಬೀಜಗಳ ಚೀಲಗಳನ್ನು ಹಂಚಿಕೆ ಮಾಡಿದರು. ಕೊನೆಗೆ ಇನ್ನೂ ಹಲವು ರೈತರು ಬೀಜ ಸಿಗದೇ ಬರಿಗೈಯಲ್ಲಿ ಮನೆಗೆ ವಾಪಸಾದರು. ಬೇಡಿಕೆಗೆ ತಕ್ಕಷ್ಟು ಸರಬರಾಜು ಮಾಡಿ, ಹಂಚಿಕೆ ಮಾಡುವಂತೆ ರೈತರು ಒತ್ತಾಯಿಸಿದರು.
"

ರಾಜ್ಯ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ವತಿಯಿಂದ ಹಾವೇರಿ ತಾಲೂಕಿನ ರೈತರಿಗೆ ಒಟ್ಟು 1500 ಬ್ಯಾಗ್ ಡೆಮೋ ಉಚಿತ ಸೋಯಾಬೀನ್ ಬೀಜಗಳನ್ನು ವಿತರಿಸಲಾಗಿದೆ. ಸದ್ಯಕ್ಕೆ ದಾಸ್ತಾನು ಖಾಲಿ ಆಗಿದೆ. ಒಕ್ಕೂಟದಿಂದ ಸರಬರಾಜು ಆದರೆ ಮತ್ತೆ ವಿತರಿಸಲಾಗುವುದು.

— ಸಂಗಮೇಶ ಹಂಪಿ, ಮ್ಯಾನೇಜರ್, ರಾಜ್ಯ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net