ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಒತ್ತಡಕ್ಕೆ ಮಣಿದು ಪೊಲೀಸರ ಕಾರ್ಯ; ರಾಜ್ಯ ಸರ್ಕಾರದ ವಿರುದ್ಧ ಬಸವರಾಜ ಬೊಮ್ಮಾಯಿ ಆಕ್ರೋಶ

Haveri, Ex CM, MP, Basavaraj Bommai, Press Meet,
Haveri, Ex CM, MP, Basavaraj Bommai, Press Meet,
Published on
ಹಾವೇರಿ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕ್ರಿಮಿನಲ್‌ಗಳಿಗೆ ಪೊಲೀಸರ ಹಾಗೂ ಕಾನೂನಿನ ಭಯವೇ ಇಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಗೆ ಸ್ಥಳೀಯ ಪೊಲೀಸರ ಭ್ರಷ್ಟಾಚಾರವೇ ಪ್ರಮುಖ ಕಾರಣವಾಗಿದೆ ಎಂದರು.
ರಾಣೇಬೆನ್ನೂರಿನಲ್ಲಿ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚುವಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಬಜರಂಗದಳ ಮತ್ತು ಹಿಂದೂ ಕಾರ್ಯಕರ್ತರನ್ನೇ ಪೊಲೀಸರು ಬಂಧಿಸಿದ್ದಾರೆ. ಪ್ಯಾಟಿಹಾಳ ಗ್ರಾಮದಲ್ಲೂ ಕೂಡ ಇತ್ತೀಚೆಗೆ ಕೊಲೆ ನಡೆದಿದೆ. ಲವ್ ಜಿಹಾದ್, ಕೊಲೆಗಳು ನಡೆದರೂ ಸರ್ಕಾರ, ಪೊಲೀಸ್ ಇಲಾಖೆ ಮೂಕಪ್ರೇಕ್ಷಕನಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಭೂಮಿಯಲ್ಲೇ ಬಿಡದಿಟೌನ್‌ಶಿಪ್ ಮಾಡಿ
ಬಿಡದಿ ಟೌನ್‌ಶಿಪ್‌ಗೆ ರೈತರ ವಿರೋಧದ ನಡುವೆಯೂ ಈ ಯೋಜನೆಯನ್ನು ಮುಂದುವರಿಸಲು ಸರ್ಕಾರದ ಆಂತರಿಕ ಕಾರ್ಯಸೂಚಿ ಕಾರಣವಾಗಿದೆ. ಮುಖ್ಯಮಂತ್ರಿಗಳಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ ಎಂದು ಬೊಮ್ಮಾಯಿ ಪ್ರಶ್ನಿಸಿದರು. ಫಲವತ್ತಾದ ಭೂಮಿ ಒತ್ತಾಯವಾಗಿ ಪಡೆಯುವ ಬದಲು, ಸರ್ಕಾರಿ ಭೂಮಿಯಲ್ಲೇ ಬಿಡದಿಟೌನ್‌ಶಿಪ್ ಮಾಡಿ ಎಂದು ಸಲಹೆ ನೀಡಿದರು.
ನೀರಾವರಿ ಇಲಾಖೆ ನಿಷ್ಕ್ರಿಯ
ರಾಜ್ಯದಲ್ಲಿ ಸುಮಾರು 350ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳಿದ್ದರೂ, ನೀರಾವರಿ ಇಲಾಖೆಯು ಕಳೆದ ಮೂರು ವರ್ಷಗಳಿಂದ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಹಾಲಿ ಮುಖ್ಯಮಂತ್ರಿಗಳೇ ಈ ಹಿಂದೆ ಈ ಇಲಾಖೆಯ ಸಚಿವರಾಗಿದ್ದರೂ ಯಾವುದೇ ಗಮನಾರ್ಹ ಪ್ರಗತಿಯಾಗಿಲ್ಲ ಎಂದು ಬೊಮ್ಮಾಯಿ ಆರೋಪಿಸಿದರು.
ಕೇಂದ್ರ ಕೃಷಿ ಸಚಿವರ ಭೇಟಿ
ರಾಜ್ಯದಲ್ಲಿ ರೈತರ ಬೆಳೆ ವಿಮೆ ದೃಢೀಕರಣ ಪತ್ರ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚೌಹಾಣ ಅವರನ್ನು ಶನಿವಾರ ಖುದ್ದಾಗಿ ಭೇಟಿಯಾಗಿ, ಚರ್ಚಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಇತ್ಯರ್ಥಪಡಿಸಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net