ಮೂವರು ದಲಿತ ಶಾಸಕರಿಗೆ ಸಚಿವ ಸ್ಥಾನ ನೀಡಿ; ರಾಜ್ಯ ಸರ್ಕಾರಕ್ಕೆ ಡಿ.ಎಸ್. ಮಾಳಗಿ ಒತ್ತಾಯ

Haveri, DS Malagi, Lidkar, Dalita MLA, Ministership,
Haveri, DS Malagi, Lidkar, Dalita MLA, Ministership,
Published on
ಹಾವೇರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟ ವಿಸ್ತರಣೆಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಈ ಪೈಕಿ ಮಾದಿಗ ಸಮಾಜದ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯದ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ಮಾದಿಗ ಸಮಾಜ ಬಹುದೊಡ್ಡ ಸಮಾಜವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜದ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿತ್ತು. ಆದ್ಯತೆ ಮೇರೆಗೆ ಮೂವರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರೂ ಸಹಿತ ಅನ್ಯಾಯ ಮಾಡಲಾಗಿದೆ. ಇದೀಗ ಡಿಕೆಶಿ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದ್ದರೂ ಸಹಿತ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡದೇ ಘೋರ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡುತ್ತಲೇ ಇದೆ. ಈ ಹಿಂದೆ 1970ರ ದಶಕದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಡಾ.ಬಾಬು ಜಗಜೀವನ್‌ರಾಂ ಅವರಿಗೂ ಅನ್ಯಾಯ ಮಾಡಿದೆ ಎಂದು ಅಸಮಾಧಾನ ಹೊರ ಹಾಕಿದರು.
ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಒಳ್ಳೆಯ ಚಾರಿತ್ರ್ಯ ಹೊಂದಿರುವ ಕೆ.ಎಚ್.ಮುನಿಯಪ್ಪ ಅವರು ಏಳು ಬಾರಿ ಸಂಸದರಾಗಿ, ಸಚಿವರಾಗಿ ಆಡಳಿತ ಮಾಡಿದ್ದಾರೆ. ಕಾನೂನು ಪದವೀಧರರಾಗಿರುವ ಅವರಿಗೆ ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು. ಜತೆಗೆ ಸಮಾಜ ಕಲ್ಯಾಣ ಖಾತೆಯನ್ನು ನೀಡಬೇಕು. ಇನ್ನೂ ಇಬ್ಬರು ಶಾಸಕರಾದ ಆರ್.ಬಿ.ತಿಮ್ಮಾಪುರ ಹಾಗೂ ಮೈಸೂರಿನ ಡಾ.ತಿಮ್ಮಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮಾದಿಗರು ದಂಗೆ ಏಳುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ಸುಭಾಸ ಬೆಂಗಳೂರ, ಪರಮೇಶ ದೇಸಳ್ಳಿ, ಮಲ್ಲೇಶಪ್ಪ ಕಡಕೋಳ, ನಾಗರಾಜ ಬಾಲಣ್ಣನವರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net