ಹಾವೇರಿ: ಯಾರು ಎಷ್ಟೇ ಒತ್ತಡ ಹಾಕಿದರೂ ಡ್ರಗ್ಸ್ ಸಹವಾಸ ಮಾಡುವುದಿಲ್ಲ ಎಂದು ಶಪಥ ಮಾಡಿ. ಸಮಾಜದಲ್ಲಿ ಒಬ್ಬ ಯುವಕ ಒಮ್ಮೆ ಡ್ರಗ್ಸ್ ತೆಗೆದುಕೊಳ್ಳಲು ಶುರು ಮಾಡಿದರೆ, ಆತನ ವರ್ತನೆಗಳೇ ಬದಲಾಗಿರುತ್ತವೆ. ಆ ವ್ಯಕ್ತಿ ಆತನ ಕುಟುಂಬ ಸೇರಿದಂತೆ ಇಡೀ ಸಮಾಜಕ್ಕೆ ಮಾರಕವಾಗುತ್ತಾನೆ. ವಿದ್ಯಾರ್ಥಿಗಳು ಇಂತಹ ದುಶ್ಚಟಕ್ಕೆ ಅವಕಾಶ ಕೊಡಬಾರದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಲಹೆ ನೀಡಿದರು.
ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ನಗರದ ಹೊರವಲಯ ದೇವಗಿರಿ ಯಲ್ಲಾಪುರದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಹಿಮ್ಸ್)ಯ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವನ್ನು 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾದರೆ ಡ್ರಗ್ಸ್ ಹಾವಳಿಯಿಂದ ಮುಕ್ತ ಮಾಡಬೇಕಿದೆ. ಸರ್ಕಾರ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಎನ್ನುವ ಅಭಿಯಾನದ ಮೂಲಕ ಯುವಕರನ್ನು ಡ್ರಗ್ಸ್‌ನಿಂದ ಮುಕ್ತಗೊಳಿಸಲು ಮುಂದಾಗಿದ್ದು, ವಿದ್ಯಾರ್ಥಿ ಯುವ ಸಮುದಾಯ ಡ್ರಗ್ಸ್‌ಗೆ ಒಳಗಾಗಿ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಒಳ್ಳೆಯ ಸ್ನೇಹಿತರನ್ನು ಮತ್ತು ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ನಿಮ್ಮ ಸುತ್ತಮುತ್ತ ಅಂತಹ ಘಟನೆಗಳು ನಡೆದರೂ ಸಹಿತ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ರಾಜ್ಯ ಸರ್ಕಾರ 2028ರೊಳಗೆ ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡಲು ಮುಂದಾಗಿದೆ. ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಭಿಯಾನ ಪ್ರಾರಂಭಿಸಿದೆ. ಮುಂದಿನ 20 ದಿನಗಳ ಕಾಲ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಕಾಲೇಜ್ ಮಟ್ಟದಲ್ಲಿ ಅಭಿಯಾನ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 79 ಕೇಸ್ ದಾಖಲಿಸಿ, 27.26ಲಕ್ಷ ರೂ. ಮೌಲ್ಯದ 73 ಕೆಜಿ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. ಮಾದಕದ್ರವ್ಯ ಸೇವನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಸನ್ಮಿತ್ರ ಯೋಜನೆಯಡಿ ಅವರ ಚಟುವಟಿಕೆಗಳ ಮೇಲ್ವಿಚಾರಣೆ, ಸಮಾಲೋಚನೆ, ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಕರ್ನಾಟಕ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿಗಳಾದ ಗಿರಿಮಲ್ಲ ತಳಕಲ್ಲ, ಲೋಕೇಶ, ನಿಸ್ಸೀಮಪ್ಪ ಹನಕನಹಳ್ಳಿ, ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಸ್ಲೋ ಪಾಯಿಸನ್..
ಡ್ರಗ್ಸ್ ಒಂಥರಾ ಸ್ಲೋ ಪಾಯಿಸನ್ ಇದ್ದಂಗೆ. ಡ್ರಗ್ಸ್‌ಗೆ ಒಳಗಾದವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಆಪರೇಷನ್ ರೈಸ್ ಹಾಗೂ ಬೇಡ ಬ್ರೋ ಅಭಿಯಾನ ಯುವ ಜನತೆಗೆ ಪ್ರೇರಣೆಯಾಗಿದೆ. ಇತರರಿಗೂ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದು ಹಿಮ್ಸ್ ಪ್ರಾಂಶುಪಾಲ ಡಾ.ಆಶಾಕಿರಣ ಹೇಳಿದರು.
"
ಪಿಯುಸಿ, ಡಿಗ್ರಿ ಹಂತದಲ್ಲಿ ಹೊಸದರ ರುಚಿ ನೋಡುವುದು ಸಾಮಾನ್ಯ. ದುಶ್ಚಟಗಳಿಗೆ ದಾಸರಾದರೆ ಶಿಕ್ಷಣ, ಕುಟುಂಬ, ವೈಯಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಆರಂಭದಲ್ಲೇ ಡ್ರಗ್ಸ್ ತಿರಸ್ಕರಿಸಬೇಕು. ಒಂದು ವೇಳೆ ಟೆಸ್ಟ್ ಮಾಡಿ ಅದಕ್ಕೆ ದಾಸರಾಗಿ ಬಿಟ್ಟರೆ, ಬಿಡುವುದು ಕಷ್ಟ. ಹೀಗಾಗಿ ಯಾರೂ ಕೂಡ ಡ್ರಗ್ಸ್ ಸಹವಾಸ ಮಾಡಬಾರದು.