ಡೀಸೆಲ್‌ಗಾಗಿ ರೈತರು, ಚಾಲಕರ ಪರದಾಟ; ಹಾವೇರಿ, ಗುತ್ತಲ, ಅಗಡಿ, ದೇವಗಿರಿ ಸೇರಿ ಹಲವು ಬಂಕ್‌ಗಳು ಬಂದ್; ಹಣ ಕೊಟ್ಟರೂ ಸಿಗದು ತೈಲ

Haveri, Diesel, Problem, Bunk Bundh,
Haveri, Diesel, Problem, Bunk Bundh,
Published on
ಹಾವೇರಿ: ಹಾವೇರಿ ಶಹರ, ತಾಲೂಕಿನ ಗುತ್ತಲ, ಹೊಸರಿತ್ತಿ, ಅಗಡಿ, ದೇವಗಿರಿ ಸೇರಿದಂತೆ ವಿವಿಧೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಸಿಗದೇ ರೈತರು ಪರದಾಡುವಂತಾಗಿದೆ. ಇದರಿಂದಾಗಿ ಹಲವು ಬಂಕ್‌ಗಳನ್ನು ಬಂದ್ ಮಾಡಲಾಗಿದ್ದು, ವಾಹನಗಳ ಮಾಲೀಕರು, ಚಾಲಕರು ವಾಹನ ಮತ್ತು ದೊಡ್ಡ ಕ್ಯಾನ್‌ಗಳನ್ನು ಹಿಡಿದು ಬಂಕ್‌ನಿಂದ ಬಂಕ್‌ಗೆ ಓಡಾಡುತ್ತಿದ್ದಾರೆ.
ಹಾವೇರಿ ಶಹರದ ಹಿರೇಗೌಡ್ರ ಪೆಟ್ರೋಲ್ ಬಂಕ್‌ನಲ್ಲಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ಡೀಸೆಲ್ ಖಾಲಿಯಾಗಿದೆ. ಬಂಕ್‌ಗೆ ಶುಕ್ರವಾರ ರಾತ್ರಿ ಒಂದು ಟ್ಯಾಂಕರ್ ಮೂಲಕ ಡೀಸೆಲ್ ಪೂರೈಕೆಯಾಗಿತ್ತು. ಶನಿವಾರ ಬೆಳಗ್ಗೆಯಿಂದಲೇ ಟ್ರಾೃಕ್ಟರ್, ಜೆಸಿಬಿ, ಲಾರಿ, ಕಾರು, ಇತರ ವಾಹನಗಳ ಮಾಲೀಕರು ಬಂಕ್‌ಗೆ ದಾಂಗುಡಿ ಇಟ್ಟು ಟ್ಯಾಂಕ್ ಪೂರ್ತಿ ಡೀಸೆಲ್ ಹಾಕಿಸಿಕೊಂಡರು. ಪರಿಣಾಮ ಮಧ್ಯಾಹ್ನದ ಹೊತ್ತಿಗೆ ಡೀಸೆಲ್ ಖಾಲಿಯಾಗಿದೆ. ಪರಿಣಾಮ ಡೀಸೆಲ್ ಖಾಲಿ, ಪೆಟ್ರೋಲ್ ಮಾತ್ರ ಲಭ್ಯವಾಗುತ್ತಿದೆ.
ಬಂಕ್ ಮಾಲೀಕರು ತೈಲ ಕಂಪನಿಗಳಿಗೆ ಪೆಟ್ರೋಲ್, ಡೀಸೆಲ್‌ಗಾಗಿ ಹಣ ಪಾವತಿಸಿದ್ದರೂ ಸಮಯಕ್ಕೆ ಸರಿಯಾಗಿ ತೈಲ ಪೂರೈಕೆಯಾಗುತ್ತಿಲ್ಲ. ಅದರಲ್ಲೂ ಡೀಸೆಲ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗುತ್ತಿದೆ. ತಾಲೂಕಿನ ಗುತ್ತಲ, ಅಗಡಿ, ದೇವಗಿರಿ, ಹೊಸರಿತ್ತಿ ಸೇರಿದಂತೆ ಹತ್ತಾರು ಬಂಕ್‌ಗಳಿಗೆ ಮೂರು ದಿನಗಳಿಂದ ಡೀಸೆಲ್ ಸರಬರಾಜು ಆಗಿಲ್ಲ.
ಶಹರದ ಮೆಣಸಿನಕಾಯಿ ಪೆಟ್ರೋಲ್ ಬಂಕ್‌ನಲ್ಲೂ ಶನಿವಾರ ಕಿಮೀವರೆಗೆ ಉದ್ದದ ವಾಹನಗಳ ಸಾಲು ಕಂಡುಬಂತು. ಡೀಸೆಲ್‌ಗಾಗಿ ಲಾರಿ, ಟ್ರಾೃಕ್ಟರ್, ಕಾರುಗಳು ಸರತಿಯಲ್ಲಿ ನಿಂತಿದ್ದವು. ರೈತರು ಕ್ಯಾನ್, ನೀರಿನ ಕ್ಯಾನ್‌ಗಳನ್ನು ತಂದು ಸರತಿ ಸಾಲಿನಲ್ಲಿ ಇಟ್ಟಿದ್ದು ಕಂಡುಬಂತು.
ಬಿತ್ತನೆಗಾಗಿ ರೈತರಿಗೆ ಬೇಡಿಕೆ
ಜಿಲ್ಲೆಯಲ್ಲಿ ಮಳೆ ಉತ್ತಮವಾಗಿ ಸುರಿದ ಬೆನ್ನಲ್ಲೇ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎತ್ತುಗಳಿಂದ ಬಿತ್ತನೆ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಬಹುತೇಕ ರೈತರು ಟ್ರಾೃಕ್ಟರ್‌ಗಳನ್ನೇ ನಂಬಿದ್ದಾರೆ. ಭೂಮಿ ಹದವಾಗಿದ್ದು ಬಿತ್ತನೆಗಾಗಿ ಟ್ರಾೃಕ್ಟರ್‌ಗೆ ಡೀಸೆಲ್ ಸಂಗ್ರಹಿಸುತ್ತಿದ್ದಾರೆ. ಕ್ಯಾನ್‌ನಲ್ಲಿ ಡೀಸೆಲ್ ಕೊಡಲ್ಲ ಎಂದು ಕೆಲ ಬಂಕ್‌ನವರು ಹೇಳುತ್ತಾರೆ. ಟ್ರಾೃಕ್ಟರ್ ತಂದರೆ ಮತ್ತೆ 5ರಿಂದ 10 ಲೀಟರ್ ವ್ಯರ್ಥವಾಗುತ್ತದೆ. ಹಾಗಾಗಿ, ಕ್ಯಾನ್‌ನಲ್ಲೇ ಕೊಡಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.
"

ಅಗಡಿ, ಗುತ್ತಲ, ದೇವಗಿರಿ ಓಡಾಡಿ ಬಂದರೂ ಡೀಸೆಲ್ ಸಿಗುತ್ತಿಲ್ಲ. ಹಾಗಾಗಿ, ಹಾವೇರಿಯ ಪೆಟ್ರೋಲ್ ಬಂಕ್‌ಗೆ ಬಂದಿದ್ದೇವೆ. ನಾಲ್ಕು ತಾಸು ಕಾದರೂ ಡೀಸೆಲ್ ಸಿಗುತ್ತಿಲ್ಲ. ಒಂದು ಕಡೆ ಬೀಜ, ಗೊಬ್ಬರ ಸುಲಭವಾಗಿ ಸಿಗುತ್ತಿಲ್ಲ. ಇಲ್ಲಿ ಡೀಸೆಲ್ ಕೂಡ ಸಿಗುತ್ತಿಲ್ಲ. ಹೀಗಾದರೆ ರೈತರು ಜೀವನ ನಡೆಸುವುದು ಹೇಗೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ಕಿವಿಗೊಡಬೇಕು.

— ಬಸಪ್ಪ ಶಿಗ್ಲಿ, ದೇವಗಿರಿ ರೈತ ಬಸವರಾಜ ಅಗಸಿಬಾಗಿಲು, ಅಗಡಿ ರೈತ


"

ಶುಕ್ರವಾರ ರಾತ್ರಿ ಒಂದು ಲೋಡ್ ಡೀಸೆಲ್ ಬಂದಿತ್ತು. ಶನಿವಾರ ಮಧ್ಯಾಹ್ನ ಖಾಲಿ ಆಯಿತು. ಹಣ ಪಾವತಿಸಿದ್ದರೂ ಆಯಿಲ್ ಕಂಪನಿಯವರು ಸಮಯಕ್ಕೆ ಸರಿಯಾಗಿ ಡೀಸೆಲ್ ಪೂರೈಸುತ್ತಿಲ್ಲ. ಇಷ್ಟು ಬೇಗ ಹೇಗೆ ಖಾಲಿ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಕಳೆದ ವರ್ಷದ ಈ ತಿಂಗಳ ಹಿಸ್ಟರಿ ಪರಿಶೀಲಿಸುತ್ತಾರೆ.

— ಉಜ್ವಲ, ಹಾವೇರಿ ಪೆಟ್ರೋಲ್ ಬಂಕ್ ಮಾಲೀಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net