ಹಾವೇರಿ: ಮಕ್ಕಳು ಭವ್ಯ ಭಾರತದ ಭವಿಷ್ಯದ ಅಮೂಲ್ಯ ರತ್ನಗಳು. ಅವರ ರಕ್ಷಣೆಯ ಹೊಣೆ ಶಾಲಾ ಬಸ್‌ಗಳ ಚಾಲಕರ ಮೇಲಿದೆ. ಶಾಲಾ ಬಸ್ ಚಾಲಕರಿಗೆ ವೈಯಕ್ತಿಕ ಮತ್ತು ಸಂಚಾರಿ ಶಿಸ್ತು ಅತಿ ಮುಖ್ಯ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಗಿರಿಮಲ್ಲ ತಳಕಟ್ಟಿ ಹೇಳಿದರು.
ತಾಲೂಕಿನ ದೇವಿಹೊಸೂರು ರಸ್ತೆಯಲ್ಲಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ (ಆರ್‌ವಿಕೆ)ದಲ್ಲಿ ಶನಿವಾರ ಆಯೋಜಿಸಿದ್ದ ನಶೆಮುಕ್ತ ಚಾಲಕರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಬಸ್‌ಗಳ ಚಾಲಕರು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಸಂಚಾರ ಸುರಕ್ಷತೆಯ ಸೂಚನೆ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳು, ಶಿಕ್ಷಕರು ಹಾಗೂ ಪಾಲಕರೊಂದಿಗೆ ಉತ್ತಮ ನಡವಳಿಕೆ ತೋರಬೇಕು. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ ದೂರ ಇರಬೇಕು. ಶಿಕ್ಷಕರು ಕೂಡ ತಮ್ಮ ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂದವ್ಯ ಹೊಂದಬೇಕು ಎಂದರು.
ವಿನಾಯಕ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಶಾಲೆ ಆರಂಭಿಸಿದೆ. ಇಲ್ಲಿರುವ ಪ್ರತಿಯೊಬ್ಬರೂ ಸಮನ್ವಯದಿಂದ ಕೆಲಸ ಮಾಡಿದರೆ ಶಾಲೆಯ ಉದ್ದೇಶ ಈಡೇರುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸತೀಶ ಬಸ್ ಚಾಲನೆ, ವೇಗಮಿತಿ, ಅಪಘಾತಗಳ ಕುರಿತು ಉಪನ್ಯಾಸ ನೀಡಿದರು. ಶಾಲೆಯ ಪ್ರಧಾನಾಚಾರ್ಯರಾದ ಶ್ಯಾಮಲಾ ಮಾತಾಜಿ ಚಾಲಕರಿಗೆ ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಸಾರಿಗೆ ವಿಭಾಗದ ಮುಖ್ಯಸ್ಥ ಜಯರಾಮ, ಉದ್ಯಮಿ ಪವನ ಬಹದ್ದೂರ ದೇಸಾಯಿ, ಹಾವೇರಿ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಶೈಲಜಾ ಎಸ್., ಶಿಕ್ಷಕರಾದ ರಂಗನಾಥ ಕುಲಕರ್ಣಿ, ರಾಘವೇಂದ್ರ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.