ಹಾವೇರಿ:ಆಹಾರ ತಂತ್ರಜ್ಞಾನ ಪದವಿ ಪಡೆದ ವಿದ್ಯಾರ್ಥಿಗಳಿಗೆ ಆಹಾರ ಸಂಸ್ಕರಣಾ ವಿಭಾಗದಲ್ಲಿ ವಿಶ್ವ ಮಟ್ಟದ ಅವಕಾಶಗಳಿವೆ. ದೇವಿಹೊಸೂರಿನ ಈ ಕಾಲೇಜ್‌ನ ಕೋರ್ಸ್ ಅನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಲಹೆ ನೀಡಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ತಾಲೂಕಿನ ದೇವಿಹೊಸೂರಿನ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 10ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಮಟ್ಟದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರವು ತ್ವರಿತವಾಗಿ ಅಭಿವೃದ್ಧಿಯಾಗುತ್ತಿದೆ. ಇದರಿಂದ ಕೃಷಿ ಹಾಗೂ ಭಾರತದ ಆರ್ಥಿಕತೆ ಕೂಡ ಹೆಚ್ಚು ಬೆಳೆಯುತ್ತಿದೆ. ಫುಡ್ ಟೆಕ್ನಾಲಜಿ ಕೋರ್ಸ್ ಹೊಂದಿರುವ ಈ ಮಹಾವಿದ್ಯಾಲಯ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳು, ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿ, ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಎಚ್.ಜಂಗಮಶೆಟ್ಟಿ ಮಾತನಾಡಿ, ಕೃಷಿ ಇಂಜಿನಿಯರಿಂಗ್ ಹಾಗೂ ಆಹಾರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳ ಅಗತ್ಯವಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಕೃಷಿ ಹಾಗೂ ಆಹಾರ ಸಂಸ್ಕರಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು.
ಮಹಾವಿದ್ಯಾಲಯದ ಡೀನ್ ಡಾ.ಲಕ್ಷ್ಮಣ ಕುಕನೂರ ಮಾತನಾಡಿ, ಪ್ರಚಲಿತ ಸವಾಲುಗಳನ್ನು ಎದುರಿಸಿ ವಿದ್ಯಾರ್ಥಿಗಳು ಆಹಾರ ತಂತ್ರಜ್ಞಾನದಲ್ಲಿರುವ ಕಠಿಣ ಪರಿಶ್ರಮದೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಗಣ್ಯರು ವಿತರಿಸಿದರು. ಸಹ ಪ್ರಾಧ್ಯಾಪಕಿ ಡಾ.ಶೋಭಾ ಎಸ್. ಮಹಾವಿದ್ಯಾಲಯದ ಹಾಗೂ ಅನ್ನಪೂರ್ಣಾ ನೀರಲಗಿ ವಸತಿ ನಿಲಯಗಳ ವಾರ್ಷಿಕ ವರದಿ ವಾಚಿಸಿದರು. ಡಾ.ವೀಣಾ ಎನ್. ಸ್ವಾಗತಿಸಿದರು. ಡಾ.ಶ್ರೀನಿವಾಸ ಜಿ. ವಂದಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಸಂಜೆ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.