ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಆಕ್ರೋಶ; ನೀಟ್ ಅಕ್ರಮ ಖಂಡಿಸಿ ಹಾವೇರಿ ವಿವಿಯಲ್ಲಿ ಪ್ರತಿಭಟನೆ

Haveri, Delhi, CJP, SFI, Protest,
Haveri, Delhi, CJP, SFI, Protest,
Published on
ಹಾವೇರಿ: ದೆಹಲಿಯಲ್ಲಿ ನೀಟ್ ಅಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಹಾವೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿವಿ ಕ್ಯಾಂಪಸ್‌ನಲ್ಲಿ ಗುರುವಾರ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಎಫ್‌ಐ ವಿವಿ ಘಟಕದ ಅಧ್ಯಕ್ಷೆ ಪೂಜಾ ಬಾರ್ಕಿ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಪೊಲೀಸರು ಗೂಂಡಾ ರೀತಿ ವರ್ತಿಸಿದ್ದಾರೆ. ನೀಟ್ ಪರೀಕ್ಷೆಯ ಅಕ್ರಮಗಳಿಂದಾಗಿ ಹಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳು ಇಂದಿಗೂ ಕಣ್ಣೀರಿಡುತ್ತಿದ್ದಾರೆ. ಅವರ ಶಾಪ ಈ ಸರ್ಕಾರಕ್ಕೆ ತಟ್ಟುತ್ತದೆ. ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಶಂಭುಲಿಂಗ ಸವದತ್ತಿ ಮಾತನಾಡಿ, ನೀಟ್ ಹಗರಣದ ವಿರುದ್ಧ ಉಪವಾಸ ನಿರತರಾಗಿದ್ದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೇ, ಶಾಂತಿಯುತವಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿದ್ದವರ ಮೇಲೆ ಬ್ರಿಟಿಷರ ರೀತಿಯಲ್ಲಿ ಪೋಲಿಸರನ್ನು ಛೂ ಬಿಟ್ಟು ಟಿಯರ್ ಗ್ಯಾಸ್, ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಉಪಾಧ್ಯಕ್ಷ ಬಸವರಾಜ ಎಸ್., ವಿದ್ಯಾರ್ಥಿಗಳಾದ ಪರಶುರಾಮ ಎಸ್., ಕಾಂತೇಶ ಹಳ್ಳೇರ, ಪ್ರವೀಣ ಮಟ್ಟೇರ, ಲೋಕೇಶ ಕೆಂಚಣ್ಣನವರ, ಶರಣ ಮಲ್ಲಕ್ಕನವರ, ಶಶಾಂಕ ಭೋಗಾವಿ, ಸಂತೋಷ, ನಾಗರಾಜ, ದೇವರಾಜ, ಕಿರಣ, ಸತೀಶ, ಶಿವರಾಜ ಲಮಾಣಿ, ಮಹಾಂತೇಶ, ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net