ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ 21 ಶಾಲೆಗಳು ಆಯ್ಕೆ; ವಿದ್ಯಾವಾಹಿನಿ ಪೋರ್ಟಲ್ ಮೂಲಕ ಅಂಕಗಳ ಪರಿಗಣನೆ; ಉತ್ತಮ ಕೆಲಸ ಮಾಡಿದ ಸದಸ್ಯರಿಗೆ ಗೌರವ

sdmc, award,
sdmc, award,
Published on
ಹಾವೇರಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಿದ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 2025-26ನೇ ಸಾಲಿನ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಜಿಲ್ಲೆಯ 21 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಸಮುದಾಯದ ಸಹಭಾಗಿತ್ವದೊಂದಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ಹಲವು ಎಸ್‌ಡಿಎಂಸಿ ಸಮಿತಿಗಳು ಹಲವು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಇಂತಹ ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿದರೆ ಮತ್ತಷ್ಟು ಅಭಿವೃದ್ಧಿಗೆ ಹಾಗೂ ಇತರ ಶಾಲೆಗಳ ಅಭಿವೃದ್ಧಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಈ ಯೋಜನೆ ರೂಪಿಸಿದೆ. ಅರ್ಹ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳು ಪ್ರಶಸ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದವು. ಪ್ರಶಸ್ತಿ ಆಯ್ಕೆಗಾಗಿ ಸಮಿತಿ ರಚಿಸಿದ್ದು, ಈ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ಮಾಡಿ, ಶಾಲೆಗಳ ನಿರ್ವಹಣೆ ಹಾಗೂ ಸಕಲ ಮಾಹಿತಿ ಆಧರಿಸಿ ವಿದ್ಯಾವಾಹಿನಿ ಪೋರ್ಟಲ್ ಮೂಲಕ ಅಂಕಗಳನ್ನು ಪರಿಗಣಿಸಿ 21 ಸಮಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪಟ್ಟಿಯನ್ನು ಇಲಾಖೆಯ ಯೋಜನಾ ನಿರ್ದೇಶಕರಿಗೆ ರವಾನಿಸಿದೆ. ಉತ್ತಮ ಎಸ್‌ಡಿಎಂಸಿ ಆಯ್ಕೆಗೆ ಸಂಬಂಧಪಟ್ಟಂತೆ 2025ರ ನವೆಂಬರ್ 27ರಂದು ಇಲಾಖೆಯ ಯೋಜನಾ ನಿರ್ದೇಶಕರು, ಎಲ್ಲ ಜಿಲ್ಲೆಯ ಉಪನಿರ್ದೇಶಕರಿಗೆ ಜ್ಞಾಪನಾ ಪತ್ರ ಕಳುಹಿಸಿದ್ದರು. ಅಂದಿನಿಂದಲೇ ಪ್ರಶಸ್ತಿಗೆ ಅರ್ಹ ಎಸ್‌ಡಿಎಂಸಿ ಆಯ್ಕೆ ಪ್ರಕ್ರಿಯೆ ಶುರುವಾಗಿತ್ತು. ಮೊದಲ ಹಂತದಲ್ಲಿ ಶಾಲಾ ಮಟ್ಟದಿಂದ ಅರ್ಹ ಶಾಲೆಗಳ ದಾಖಲಾತಿ ನೋಂದಣಿ ಆರಂಭವಾಗಿತ್ತು. ಸಂಬಂಧಪಟ್ಟ ಶಾಲೆಯ ಮುಖ್ಯಶಿಕ್ಷಕರು, ಆನ್‌ಲೈನ್ ಮೂಲಕ ವಿದ್ಯಾವಾಹಿನಿ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಬೇಕಿತ್ತು. ಪ್ರಶಸ್ತಿಗೆ ಅರ್ಹವಾದ ಮಾನದಂಡಗಳನ್ನು ನಮೂದಿಸಬೇಕಿತ್ತು. ಅದರಂತೆ ಹಲವು ಶಾಲೆಯವರು, ಪ್ರಶಸ್ತಿಗಾಗಿ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಿದ್ದರು.
ಎರಡನೇ ಹಂತದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಪಿಆರ್‌ಪಿ, ಇಸಿಒ ಹಾಗೂ ಬಿಆರ್‌ಪಿ ಒಳಗೊಂಡ ತ್ರಿಸದಸ್ಯ ತಂಡದವರು ಅರ್ಹ ಶಾಲೆಗೆ ಭೇಟಿ ನೀಡಿ ಮಾಹಿತಿ ಪರಿಶೀಲಿಸಿದ್ದರು. ಅಂಕಗಳ ಸಮೇತ ಪೋರ್ಟಲ್‌ನಲ್ಲಿ ಅಭಿಪ್ರಾಯ ದಾಖಲಿಸಿದ್ದರು. ಮೂರನೇ ಹಂತದಲ್ಲಿ ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳನ್ನು ಒಳಗೊಂಡ ತಂಡವು, ಶಾಲೆಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಮೇತ ಅಂಕಗಳನ್ನು ಪೋರ್ಟಲ್‌ನಲ್ಲಿ ನಮೂದಿಸಿದ್ದರು.
ನಾಲ್ಕನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ನೇತೃತ್ವದ ತಂಡವು ಅರ್ಹ ಶಾಲೆಗಳಿಗೆ ಭೇಟಿ ನೀಡಿ ಅಂತಿಮ ಪರಿಶೀಲನೆ ನಡೆಸಿತು. ಹೆಚ್ಚು ಅಂಕ ಪಡೆದ 21 ಶಾಲೆಗಳನ್ನು ಆಯ್ಕೆ ಮಾಡಿ, ಅದೇ ಶಾಲೆಗಳನ್ನು ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಿದೆ.
ಲಕ್ಷ ರೂ. ನಗದು ಬಹುಮಾನ
ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಯು ಮೂರು ಶಾಲೆಗಳ ವಿಭಾಗದಲ್ಲಿ ನಗದು ಬಹುಮಾನವನ್ನು ಒಳಗೊಂಡಿದೆ. ಪ್ರತಿ ತಾಲೂಕಿನಲ್ಲಿ 1 ಪ್ರಾಥಮಿಕ ಶಾಲೆಗೆ 50,000 ರೂ., ಹಿರಿಯ ಪ್ರಾಥಮಿಕ ಶಾಲೆಗೆ 75,000 ರೂ. ಹಾಗೂ ಪ್ರೌಢಶಾಲೆಗೆ 1 ಲಕ್ಷ ರೂ. ಅನುದಾನದ ರೂಪದಲ್ಲಿ ಬಹುಮಾನ ಸಿಗಲಿದೆ. ಎಸ್‌ಡಿಎಂಸಿ ಖಾತೆಗೆ ಹಣ ಜಮೆಯಾಗಲಿದ್ದು, ಇದನ್ನು ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ ಎಂದು ಡಿಡಿಪಿಐ ಮೋಹನ ದಂಡಿನ ತಿಳಿಸಿದರು.
"

ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿರುವ ಎಸ್‌ಡಿಎಂಸಿಗಳ ಆಯ್ಕೆ ಮಾಡಲಾಗಿದೆ. ಎಸ್‌ಡಿಎಂಸಿ ಸದಸ್ಯರು ಶಿಕ್ಷಕರು, ಗ್ರಾಮಸ್ಥರ ಸಮನ್ವಯದೊಂದಿಗೆ ಶಾಲೆಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಆಯ್ಕೆಗೆ ಅರ್ಹವಾದ ಶಾಲೆಗಳು
ಬ್ಯಾಡಗಿ: ಬಿಸಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಮ್ಮೂರಿನ ಫಾಸಿ ಪ್ರಭಾವತಿ ಪ್ರೌಢಶಾಲೆ, ಗುಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
ಹಾನಗಲ್ಲ: ಕೊಪ್ಪರಸಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಂಡೋಜಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶೇಷಗಿರಿ ಸರ್ಕಾರಿ ಪ್ರೌಢಶಾಲೆ.
ಹಾವೇರಿ: ಗುತ್ತಲ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಟೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆ.
ಹಿರೇಕೆರೂರ: ಕುಂಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಕುಂಚೂರ ಸರ್ಕಾರಿ ಕನ್ನಡ ಪ್ರೌಢಶಾಲೆ, ಹಾಡೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ.
ರಾಣೆಬೆನ್ನೂರ: ಹೊನ್ನತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹರನಗಿರಿಯ ಪ್ರೌಢಶಾಲೆ, ಕಜ್ಜರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ.
ಸವಣೂರ: ಹುರುಳಿಕುಪ್ಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಡಕೋಳ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚವಡಾಳದ ಸರ್ಕಾರಿ ಪ್ರೌಢಶಾಲೆ
ಶಿಗ್ಗಾಂವಿ: ಹಿರೇಮಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನಾರಾಯಣಪುರದ ಕರ್ನಾಟಕ ಪಬ್ಲಿಕ್ ಶಾಲೆ, ತಿಮ್ಮಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net