86,894 ಕುಟುಂಬಗಳಿಗೆ ಸ್ವಂತ ಮನೆಯಿಲ್ಲ; ಸಮೀಕ್ಷೆಯಲ್ಲಿ ನಿವೇಶನ ರಹಿತರ ಅಂಕಿ- ಅಂಶ ಬಹಿರಂಗ; ಗ್ರಾಪಂನಲ್ಲಿ ಅರ್ಜಿ ಸಲ್ಲಿಸಲು 30ರವರೆಗೆ ಅವಕಾಶ

haveri-Dc, ZP CEO, houseless, People, Servey,
haveri-Dc, ZP CEO, houseless, People, Servey,
Published on
ಹಾವೇರಿ: ಗುಡಿಸಲೇ ಆಗಿರಲಿ ಒಂದು ಸ್ವಂತ ಸೂರು ಅಥವಾ ಮನೆ ಹೊಂದಿರಬೇಕು ಎಂಬುದು ಬಹುತೇಕ ಎಲ್ಲ ಜನರ ಕನಸಾಗಿರುತ್ತದೆ. ಆದರೆ, ದುಬಾರಿ ಕಾಲದಲ್ಲಿ ತುತ್ತು ಅನ್ನಕ್ಕೆ ಪರದಾಡುವ ಸಾವಿರಾರು ಕುಟುಂಬಗಳು ಸ್ವಂತ ಸೂರು ಹೊಂದುವುದು ಕನಸಿನ ಮಾತಾಗಿದೆ. ಹೀಗೆ ಸ್ವಂತ ಮನೆ ಇಲ್ಲದ 86,894 ಕುಟುಂಬಗಳು ಜಿಲ್ಲೆಯಲ್ಲಿ ಇರುವುದು ಸಮೀಕ್ಷೆಯಿಂದ ಪತ್ತೆಯಾಗಿದೆ.
ಬಡತನ, ಆರ್ಥಿಕ, ಸಾಮಾಜಿಕ ಕಾರಣಗಳಿಂದಾಗಿ ಸ್ವತಃ ವಸತಿ ಹಾಗೂ ನಿವೇಶನಗಳಿಂದ ವಂಚಿತವಾದ ಕುಟುಂಬಗಳ ಮಾಹಿತಿ ಸಂಗ್ರಹಿಸಲು ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಜಿಲ್ಲೆಯಲ್ಲಿರುವ 86,894 ಕುಟುಂಬಗಳಿಗೆ ವಸತಿ ಹಾಗೂ ನಿವೇಶನ ಇಲ್ಲವೆಂಬ ಮಾಹಿತಿಯು ಸಮೀಕ್ಷೆಯಿಂದ ಗೊತ್ತಾಗಿದೆ. ಇಂತಹ ವಸತಿ ರಹಿತರಿಗೆ ವಸತಿ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸಲು ಜೂನ್ 30ರವರೆಗೆ ದಿನಾಂಕ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಮಾಲೀಕತ್ವದಿಂದ ವಂಚಿತರಾಗಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ವಿತರಿಸಿದ್ದು, ಇದರ ಬೆನ್ನಲ್ಲೇ ರಾಜ್ಯದಲ್ಲಿರುವ ವಸತಿ ಹಾಗೂ ನಿವೇಶನ ವಂಚಿತರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದ ಹಳ್ಳಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರು ಹೆಚ್ಚಾಗಿ ವಾಸವಿದ್ದಾರೆ. ಇವರ ಪೈಕಿ, ವಸತಿ ಹಾಗೂ ನಿವೇಶನರಹಿತರ ಮಾಹಿತಿ ದಾಖಲಿಸುವ ಕೆಲಸವನ್ನು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಡುತ್ತಿದ್ದಾರೆ.
ರಾಜ್ಯದಲ್ಲಿರುವ ವಸತಿ ಹಾಗೂ ನಿವೇಶನ ರಹಿತರ ಬಗ್ಗೆ 2018ರಲ್ಲಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗಿತ್ತು. ಈಗ ಅದೇ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಅದರ ಜತೆಯಲ್ಲಿ ಹೊಸದಾಗಿ ಅರ್ಹರ ಹೆಸರು ಸೇರಿಸಲಾಗುತ್ತಿದೆ. ಪಟ್ಟಿ ಸಿದ್ಧತೆ ಕೆಲಸ ಪ್ರಗತಿಯಲ್ಲಿದ್ದು, ಅಂತಿಮ ಹೆಸರುಗಳ ಸೇರ್ಪಡೆ ಮಾತ್ರ ಬಾಕಿಯಿದೆ. ಸರ್ಕಾರ ಜೂ.30ರವರೆಗೆ ಹೆಸರು ಸೇರ್ಪಡೆಗೆ ಅವಕಾಶ ನೀಡಿದೆ. ಅದಾದ ನಂತರ, ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ, ರಟ್ಟೀಹಳ್ಳಿ, ಹಾನಗಲ್ಲ, ಶಿಗ್ಗಾಂವ ಹಾಗೂ ಸವಣೂರ ತಾಲೂಕಿನಲ್ಲಿ ಸಮೀಕ್ಷೆ ನಡೆಯುತ್ತಿದೆ. ಸ್ವತಃ ವಸತಿ ಹಾಗೂ ನಿವೇಶನ ಇಲ್ಲದವರು, ಸಂಬಂಧಪಟ್ಟ ದಾಖಲೆಗಳ ಸಮೇತ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಸಮೀಕ್ಷೆ ಮಾಹಿತಿ ತಿಳಿದಿರುವ ಹಲವರು ಈಗಾಗಲೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆಯ ಪಟ್ಟಿಯನ್ನು ಅಂತಿಮಗೊಳಿಸಲು ಸಜ್ಜಾಗಿರುವ ಜಿಲ್ಲಾ ಪಂಚಾಯಿತಿ, ಹೆಸರು ನೋಂದಣಿ ಮಾಡಿಕೊಳ್ಳಲು ಮೇ 31 ಕೊನೆ ದಿನವೆಂದು ಘೋಷಿಸಿತ್ತು. ಇದೀಗ ದಿನಾಂಕವನ್ನು ಜೂನ್ 30ರವರೆಗೆ ಮುಂದೂಡಲಾಗಿದ್ದು, ತಮ್ಮ ಗ್ರಾಪಂ ಕಚೇರಿಯಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ತಾಲೂಕಾವಾರು ಮಾಹಿತಿ
ಹಾನಗಲ್ಲ (19,287) ಹಾಗೂ ಹಾವೇರಿ (16,282) ತಾಲೂಕಿನಲ್ಲಿ ಅಧಿಕ ವಸತಿ ನಿವೇಶನ ರಹಿತರಿದ್ದು, ಶಿಗ್ಗಾಂವಿ (10,328), ರಾಣೆಬೆನ್ನೂರ (10,249), ಸವಣೂರ (9,598), ರಟ್ಟೀಹಳ್ಳಿ (7,293), ಬ್ಯಾಡಗಿ (7,165), ಹಿರೇಕೆರೂರ (6,692) ತಾಲೂಕುಗಳು ನಂತರದ ಸ್ಥಾನದಲ್ಲಿವೆ.
ಅರ್ಹರ ಕೈಬಿಟ್ಟರೆ ಪಿಡಿಒ ಹೊ ೆ
ವಸತಿ ಅಥವಾ ನಿವೇಶನ ರಹಿತರು ಸಂಬಂಧಪಟ್ಟ ದಾಖಲೆಗಳೊಂದಿಗೆ ಗ್ರಾ.ಪಂ. ಕಚೇರಿಗೆ ಸಂಪರ್ಕಿಸಬೇಕು. ತಮ್ಮ ಹೆಸರು ಪಟ್ಟಿಯಲ್ಲಿದೆಯಾ ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಹ ಫಲಾನುಭವಿಗಳನ್ನು ಕೈ ಬಿಟ್ಟಿದ್ದರೆ, ಅದಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನೇ ಹೊಣೆಯನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಕೆ ಸಹ ನೀಡಿದೆ.
ಯಾವ್ಯಾವ ದಾಖಲೆ ಬೇಕು ?
2018ರ ವಸತಿ ಹಾಗೂ ನಿವೇಶನ ರಹಿತರ ಪಟ್ಟಿಯಲ್ಲಿ ಹೆಸರು ಇಲ್ಲದವರು ಸ್ಥಳೀಯ ಗ್ರಾಪಂ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು. ವಸತಿ ರಹಿತರಿಗೆ ಜೂನ್ 30ರವರೆಗೆ ಮಾತ್ರ ಅವಕಾಶವಿದ್ದು, ನಿವೇಶನರಹಿತರಿಗೆ ಕಾಲಮಿತಿ ಇಲ್ಲ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ರಾಜೀವ ಗಾಂದಿ ವಸತಿ ನಿಗಮ ಆದೇಶ ಹೊರಡಿಸಿದೆ.
ಹೊಸ ಯೋಜನೆಗೆ ಅರ್ಹತೆ
ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ರಹಿತರು ಎಷ್ಟಿದ್ದಾರೆ? ಎಂಬುದನ್ನು ತಿಳಿದುಕೊಂಡು ಯೋಜನೆ ರೂಪಿಸಲು ಸಮೀಕ್ಷೆ ಸಹಾಯವಾಗಲಿದೆ. ಜತೆಗೆ, ಸರ್ಕಾರ ಯೋಜನೆ ಜಾರಿಗೆ ತಂದ ಸಂದರ್ಭದಲ್ಲಿ ಸಮೀಕ್ಷೆಯಲ್ಲಿರುವ ಹೆಸರುಗಳನ್ನೇ ಫಲಾನುಭವಿಗಳಾಗಿ ಆಯ್ಕೆ ಮಾಡಲಿದೆ. ಹೀಗಾಗಿ, ವಸತಿ, ನಿವೇಶನ ರಹಿತ ಕುಟುಂಬಗಳು ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು ಮಹತ್ವ ಪಡೆದಿದೆ.
"

ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ವಸತಿ ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಿ, 2018ರಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ಈಗ ಅದೇ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಜೂನ್ 30ರವರೆಗೆ ಹೊಸದಾಗಿ ಹೆಸರು ನೋಂದಾಯಿಸಲು ಅವಕಾಶವಿದೆ. ಹೀಗಾಗಿ, ಅರ್ಹರು ದಾಖಲೆ ಸಮೇತ ಹೆಸರು ನೋಂದಣಿ ಮಾಡಿಸಬೇಕು.

— ದಲ್ಜಿತ್‌ಕುಮಾರ, ಸಿಇಒ, ಜಿಲ್ಲಾ ಪಂಚಾಯಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net