ಪಾತಾಳಕ್ಕೆ ಕುಸಿಯುತ್ತಿದೆ ಅಂತರ್ಜಲ!; ಖಾಲಿಯಾಗುತ್ತಿವೆ ನದಿ, ಕೆರೆ, ಕಟ್ಟೆಗಳ ಒಡಲು; ಮುಂಗಾರು ಮಳೆ ಕೈಕೊಟ್ಟರೆ ದೇವರೇ ಗತಿ

Haveri, DC, ZP, CEO, Ground Water, Problem,
Haveri, DC, ZP, CEO, Ground Water, Problem,
Published on
ಹಾವೇರಿ: ಕಳೆದ ವರ್ಷ ಆರಂಭದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮುಂಗಾರು ಮಳೆ, ವಷಾಂತ್ಯದಲ್ಲಿ ಹಿಂಗಾರು ಮಳೆ ಕೊರತೆ ಉಂಟಾಗಿತ್ತು. ಇದೇ ಕಾರಣಕ್ಕೆ ಮತ್ತು ಈ ಬಾರಿ ಭಾರೀ ಪ್ರಮಾಣದಲ್ಲಿ ನೆತ್ತಿ ಸುಡುವ ಬಿಸಿಲು ಕಾಣಿಸಿಕೊಂಡ ಪರಿಣಾಮ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಅಂತರ್ಜಲ ಮಟ್ಟದಲ್ಲಿ ಭಾರೀ ಕುಸಿತ ಕಾಣುತ್ತಿದೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ 17.68 ಮೀಟರ್ ಆಳಕ್ಕೆ ಅಂತರ್ಜಲ ಕುಸಿತ ಕಂಡಿದೆ. 2025 ಏಪ್ರಿಲ್‌ನಲ್ಲಿ 15.22 ಮೀಟರ್‌ನಷ್ಟು ಇತ್ತು. 2024ರ ಏಪ್ರಿಲ್‌ನಲ್ಲಿ 23.81ಕ್ಕೆ ಕುಸಿದಿತ್ತು. 2023ರಲ್ಲಿ 15.01 ಮೀಟರ್, 2022ರಲ್ಲಿ 12.28 ಮೀಟರ್‌ನಷ್ಟು ಅಂತರ್ಜಲ ಇತ್ತು. ಈ ವರ್ಷ ಬಿಸಿಲಾಘಾತದಿಂದ ಅಂತರ್ಜಲ ವೇಗವಾಗಿ ಪಾತಾಳದತ್ತ ಕುಸಿತ ಕಾಣುತ್ತಿದೆ. ಪರಿಣಾಮ ಜಿಲ್ಲೆಯ ನದಿಗಳು, ಕೆರೆ, ಕಟ್ಟೆಗಳ ಒಡಲು ಬರಿದಾಗುತ್ತಿದೆ. ಅಂತರ್ಜಲ ಮಟ್ಟ ಗರಿಷ್ಠ ಮಟ್ಟದಲ್ಲಿ ಪಾತಾಳಕ್ಕೆ ಕುಸಿಯುತ್ತಿದೆ. ಇದರಿಂದಾಗಿ ಕೃಷಿ ಭೂಮಿಯ ಜತೆಗೆ ಜನ, ಜಾನುವಾರುಗಳ ಗಂಟಲು ಒಣಗುತ್ತಿವೆ.
ರೈತರು ಬೊರ್‌ವೆಲ್, ಪಂಪ್‌ಸೆಟ್‌ಗಳ ಮೂಲಕ ತಮ್ಮ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಯಿಸುತ್ತಿದ್ದಾರೆ. ಅಡಿಕೆ, ತೆಂಗು, ಪಪ್ಪಾಯ, ಬಾಳೆ, ಎಲೆ, ಪೇರಲೆ, ಚಿಕ್ಕು, ಮಾವು, ಇತರ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ನೀರುಣಿಸುವ ಮೂಲಕ ಮರ, ಗಿಡಗಳ ರಕ್ಷಣೆಗೆ ಮುಂದಾಗಿದ್ದಾರೆ.
ಕಳೆದ ಐದು ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ (23.18 ಮೀ.) ಅತಿ ಹೆಚ್ಚು ಅಂತರ್ಜಲ ಕುಸಿತ ಕಾಣಿಸಿಕೊಂಡಿತ್ತು. ಮೇ, ಜೂನ್ ತಿಂಗಳಲ್ಲಿ ಮಳೆ ಸರಿಯಾದ ಮಳೆ ಆಗದಿದ್ದರೆ 2024ರ ಪರಿಸ್ಥಿತಿ ಮತ್ತೆ ಉದ್ಭವ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಭೂವಿಜ್ಞಾನಿಗಳು.
ದಕ್ಷಿಣ ಪ್ರಸ್ಥಭೂಮಿ
ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮಧ್ವತಿ, ಧರ್ಮಾ ನದಿಗಳು ಹರಿಯುತ್ತವೆ. ಜಿಲ್ಲೆಯು ದಕ್ಷಿಣ ಪ್ರಸ್ಥಭೂಮಿಯಾಗಿದ್ದು, ರಾಜ್ಯದ ಮಧ್ಯ ಭಾಗದಲ್ಲಿದೆ. ಅರೆ ಮಲೆನಾಡು ಮತ್ತು ಅರೆ ಉಷ್ಣವಲಯ ಪ್ರದೇಶವಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ನೈಋತ್ಯ ಮುಂಗಾರು ಮಳೆ ಸುರಿಯುತ್ತದೆ. ನವೆಂಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮುಂಗಾರಿನಲ್ಲಿ ಕಡಿಮೆ ಪ್ರಮಾಣದ ಮಳೆ ಸುರಿಯುತ್ತದೆ.
ಬತ್ತುತ್ತಿವೆ ಬೋರ್‌ವೆಲ್‌ಗಳು
ಇತ್ತೀಚಿನ ಅಂತರ್ಜಲ ಮೌಲೀಕರಣದ ಪ್ರಕಾರ ಜಿಲ್ಲೆಯ ರಟ್ಟಿಹಳ್ಳಿ, ಬ್ಯಾಡಗಿ, ಹಿರೇಕೆರೂರ ಮತ್ತು ರಾಣೆಬೆನ್ನೂರ ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚಾಗಿ ಬಳಕೆಯಾಗುತ್ತಿದೆ. ಉಳಿದ ತಾಲೂಕುಗಳಲ್ಲೂ ಬೋರ್‌ವೆಲ್‌ಗಳ ಮೇಲೆ ಹೆಚ್ಚಿನ ಅವಲಂಬನೆಯಾಗುತ್ತಿದೆ. ಹಾಗಾಗಿ, ಅನೇಕ ಬೋರ್‌ವೆಲ್‌ಗಳಲ್ಲಿ ನೀರಿನ ಸೆಲೆಯೂ ಕಣ್ಮರೆಯಾಗುತ್ತಿದೆ. ಹಲವು ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ.
ಪೋಲು ಮಾಡದಿರಿ ಜೀವಜಲ
ಅಂತರ್ಜಲ ಕುಸಿತದಿಂದ ಜಿಲ್ಲೆಯಲ್ಲಿ ಹಲವೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಸದ್ಯಕ್ಕೆ ಇರುವ ನೀರು ಪೋಲಾಗದಂತೆ ಕಾಪಾಡುವುದು. ಮಿತವಾಗಿ ಬಳಸುವುದು ನಮ್ಮೆಲ್ಲರ ಮೇಲಿನ ಜವಾಬ್ದಾರಿಯಾಗಿದೆ. ಮಳೆ ನೀರು ಕೊಯ್ಲು, ಮತ್ತಿತರ ಯೋಜನೆಗಳ ಮೂಲಕ ಅಂತರ್ಜಲ ಹೆಚ್ಚಿಸುವ ಕಾರ್ಯದಲ್ಲಿ ಸರ್ಕಾರದ ಜತೆಗೆ ಸಾರ್ವಜನಿಕರೂ ತೊಡಗಿಸಿಕೊಳ್ಳಬೇಕಿದೆ ಎಂಬುದು ‘ವಿಜಯವಾಣಿ; ಕಳಕಳಿಯಾಗಿದೆ.
ರಟ್ಟೀಹಳ್ಳಿ, ಹಿರೇಕೆರೂರ, ಹಾವೇರಿಯಲ್ಲಿ ಹೆಚ್ಚು
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ರಟ್ಟೀಹಳ್ಳಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಸರಾಸರಿ 26.15 ಮೀ, ಹಿರೇಕೆರೂರ 24.83 ಮೀ., ಹಾವೇರಿ ತಾಲೂಕಿನಲ್ಲಿ 22.39 ಮೀ.ವರೆಗೆ ಕುಸಿತ ಕಂಡಿದೆ. ಈ ಮೂಲಕ ಈ ಮೂರು ತಾಲೂಕುಗಳಲ್ಲಿ ಹೆಚ್ಚು ಹೆಚ್ಚಿನ ಪ್ರಮಾಣದ ಅಂತರ್ಜಲ ಕುಸಿತ ಕಂಡುಬರುತ್ತಿದೆ. ಹಾನಗಲ್ಲನಲ್ಲಿ 16.51 ಮೀ., ಸವಣೂರ 15.60 ಮೀ., ರಾಣೆಬೆನ್ನೂರ 13.76 ಮೀ., ಶಿಗ್ಗಾಂವಿ 9.22 ಮೀಟರ್‌ನಲ್ಲಿ ಅಂತರ್ಜಲ ಸಿಗುತ್ತಿದೆ.
"

ಅಂತರ್ಜಲ ಹೆಚ್ಚಳ ಕುರಿತು ಎಲ್ಲರೂ ಗಮನ ಹರಿಸಬೇಕು. ಮನರೇಗಾ ಯೋಜನೆಯಡಿ ಕೆರೆ ಹೂಳೆತ್ತುವುದು, ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಸಮರ್ಪಕವಾಗಿ ಮಾಡಬೇಕು. ಮಳೆನೀರು ಕೊಯ್ಲು ಯೋಜನೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ರೈತರು ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಬೇಕು. ಹನಿ ನೀರಾವರಿ ಯೋಜನೆ ಅಳವಡಿಸಿಕೊಳ್ಳಬೇಕು.

— ಸಂತೋಷಪ್ಯಾಟಿ ಗಾಣಗೇರ, ಹಿರಿಯ ಭೂವಿಜ್ಞಾನಿ


ತಾಲೂಕುವಾರು ಅಂತರ್ಜಲ ಮಟ್ಟದ ವಿವರ
(ಏಪ್ರಿಲ್ ತಿಂಗಳಲ್ಲಿ. ಮೀಟರ್‌ಗಳಲ್ಲಿ)
ತಾಲೂಕು 2022 2023 2024 2025 2026
ಹಾವೇರಿ 09.43 11.75 29.80 18.89 22.39
ರಾಣೆಬೆನ್ನೂರ 9.18 9.86 18.68 11.11 13.76
ಹಿರೇಕೆರೂರ 12.18 17.60 39.93 24.49 24.83
ರಟ್ಟಿಹಳ್ಳಿ 16.06 21.00 28.03 20.75 26.15
ಬ್ಯಾಡಗಿ 10.24 12.11 18.88 11.22 13.00
ಹಾನಗಲ್ಲ 13.76 16.31 23.36 14.52 16.51
ಸವಣೂರ 13.47 12.10 20.96 13.36 15.60
ಶಿಗ್ಗಾಂವಿ 06.51 08.28 10.85 07.34 09.22
----------------------------------------------
ಒಟ್ಟು 12.28 15.11 23.81 15.22 17.68
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net