ಡೊನೇಶನ್ ಪಡೆದ ಶಾಲೆ ಕುರಿತು ಮಾಹಿತಿ ನೀಡಿ; ಶುಲ್ಕ ಪಟ್ಟಿಯನ್ನು ನೋಟಿಸ್ ಫಲಕದಲ್ಲಿ ಪ್ರದರ್ಶಿಸಬೇಕು; ಡೇರಾ ಸಮಿತಿ ಸಭೆಯಲ್ಲಿ ಡಿಸಿ ಸೂಚನೆ

Haveri, DC, Warnings, To Pvt Schools, DERA Commitee, Meeting,
Haveri, DC, Warnings, To Pvt Schools, DERA Commitee, Meeting,
Published on
ಹಾವೇರಿ: ಜಿಲ್ಲೆಯಲ್ಲಿ ಯಾವ ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ಪಡೆಯುತ್ತಿದ್ದಾರೆ ಎಂಬುದನ್ನು ದಾಖಲೆಗಳ ಸಮೇತ ಸಾರ್ವಜನಿಕರು ನೇರವಾಗಿ ನನಗೆ ತಿಳಿಸಿದರೆ ಕ್ರಮ ಜರುಗಿಸಲಾಗುವುದು. ಕನಿಷ್ಠ ಒಂದು ಶಾಲೆಯ ವಿರುದ್ಧವಾದರೂ ಕ್ರಮ ಜರುಗಿಸಿದರೆ, ಎಲ್ಲ ಶಾಲೆಯವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಾರ್ವಜನಿಕರಿಗೆ ಕರೆ ನೀಡಿದರು.
ನಗರದ ಹೊರವಲಯ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಮತ್ತು ವಸೂಲಾತಿ ತಡೆಗಟ್ಟುವ ಸಲುವಾಗಿ ಆಯೋಜಿಸಿದ್ದ ಡೇರಾ (ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಮತ್ತು ವಸೂಲಾತಿ ತಡೆಗಟ್ಟುವ ಸಲುವಾಗಿ ಡೇರಾ ರಚಿಸಲಾಗಿದೆ. ಆದರೆ, ಕಳೆದ ವರ್ಷ ಸಭೆ ಮಾಡಿಲ್ಲ. ಈ ವರ್ಷವೂ ಪ್ರವೇಶಾತಿಗೂ ಮುನ್ನ ಸಭೆ ಮಾಡಬೇಕಿತ್ತು. ಆದರೆ, ಡಿಡಿಪಿಐ ಅವರು ಮಾಡಿಲ್ಲ. ಈಗ ನಾನೇ ಆಸಕ್ತಿ ವಹಿಸಿ ಸಭೆ ಮಾಡುತ್ತಿದ್ದೇನೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ರೈತರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಂಥ ಮಹಾನಗರದ ರೀತಿಯಲ್ಲಿ ಜಿಲ್ಲೆಯಲ್ಲಿ ಶಿಕ್ಷಣದ ಹೆಸರಿನಲ್ಲಿ ಹೆಚ್ಚು ಶುಲ್ಕ ವಸೂಲಿ ಸರಿಯಲ್ಲ. ಕಡಿಮೆ ಸೌಕರ್ಯವಿರುವ ಶಾಲೆಗಳು, ಅತಿ ಹೆಚ್ಚು ಶುಲ್ಕ ಪಡೆಯುವುದು ಅವೈಜ್ಞಾನಿಕ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸಾಮಾಜಿಕ ಜವಾಬ್ದಾರಿ ಸಂಸ್ಥೆಯವರ ಮೇಲಿದೆ. ಸರ್ಕಾರದ ಮಾನದಂಡಗಳನ್ನು ಪಾಲಿಸುತ್ತ, ಮಾನವೀಯತೆ ದೃಷ್ಟಿಯಿಂದ ಶುಲ್ಕ ನಿಗದಿಪಡಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗದಿತ ದಿನದಂದು ಶಾಲೆಗಳಿಗೆ ಭೇಟಿ ನೀಡಿ, ಎಲ್ಲವನ್ನೂ ಪರಿಶೀಲಿಸಿ ವರದಿ ನೀಡಬೇಕು. ಶಿಕ್ಷಣ ಸಂಸ್ಥೆಯವರು ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ, ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಶಿಕ್ಷಣ ಸಂಸ್ಥೆಯವರು ಶುಲ್ಕದ ಪಟ್ಟಿಯನ್ನು ನೋಟಿಸ್ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಶೂ, ಸಾಕ್ಸ್, ನೋಟ್‌ಪುಸ್ತಕ ಸೇರಿದಂತೆ ಯಾವುದಾದರೂ ವಸ್ತುವನ್ನು ಶಾಲೆಯಲ್ಲಿ ಮಾರುತ್ತಿದ್ದರೆ, ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ಪಡೆಯಬಾರದು. ನಿಯಮ ಉಲ್ಲಂಘನೆಯಾದರೆ, ಪಾಲಕರು ಧೈರ್ಯವಾಗಿ ನನಗೆ ದೂರು ನೀಡಬಹುದು ಎಂದು ಡಿಸಿ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ ಮಾತನಾಡಿ, ಭಾಷಾ ನೀತಿ ಪಾಲನೆ, ಪರವಾನಗಿ ನವೀಕರಣ, ಅನುಮತಿ ಇಲ್ಲದೇ ತರಗತಿ ನಡೆಸುವುದು, ನೋಂದಣಿ, ದಾಖಲಾತಿ ನಿರ್ವಹಣೆಯಲ್ಲಿ ಲೋಪ, ಏಪ್ರಿಲ್‌ಗೂ ಮುನ್ನವೇ ಪ್ರವೇಶಾತಿ ಮುಕ್ತಾಯ, ಶಿಕ್ಷಕರ ನೇಮಕಾತಿ ಸೇರಿದಂತೆ ಎಲ್ಲ ಅಂಶಗಳನ್ನು ಶಿಕ್ಷಣ ಸಂಸ್ಥೆಯವರು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ, ನೋಟಿಸ್ ನೀಡಿ ಕ್ರಮ ಜರುಗಿಸಲು ಅವಕಾಶವಿದೆ. ಕ್ಷೇತ್ರ ಶಿಕ್ಷಣಾಧಿಕಾರಿಯವರು ಹಾಗೂ ನಾನು, ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡುತ್ತೇವೆ. ವ್ಯವಸ್ಥೆ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆಯಾದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ಮಾಲೀಕರು, ವಿವಿಧ ಸಂಘಟನೆಗಳ ಮುಖಂಡರು, ಶಿಕ್ಷಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಾನ್ಯತೆ ರದ್ದು ಎಚ್ಚರಿಕೆ
ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕಾದ ಮಾನದಂಡಗಳ ಬಗ್ಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿದೆ. ಸುತ್ತೋಲೆ ಪ್ರಕಾರ 16 ಅಂಶಗಳನ್ನು ಶಿಕ್ಷಣ ಸಂಸ್ಥೆಯವರು ಕಡ್ಡಾಯವಾಗಿ ಪಾಲಿಸಬೇಕು. ಒಂದೇ ಒಂದೂ ಅಂಶ ಉಲ್ಲಂಘಿಸಿದರೂ ನೋಟಿಸ್ ನೀಡಿ ಮಾನ್ಯತೆ ರದ್ದುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
"

ಸರ್ಕಾರಿ ಶಾಲೆಗಳನ್ನು ಮೊದಲು ಸದೃಢಗೊಳಿಸಬೇಕು. ಈ ಬಗ್ಗೆ ರಾಜ್ಯ, ದೇಶ ಮಟ್ಟದಲ್ಲಿ ಚರ್ಚೆಯಾಗಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕರೆ, ಯಾರೊಬ್ಬರೂ ಖಾಸಗಿ ಶಾಲೆಗೆ ಹೋಗುವುದಿಲ್ಲ.

— ಹನುಮಂತಪ್ಪ ಕಬ್ಬಾರ, ರೈತ ಮುಖಂಡ

"

ಜಿಲ್ಲೆಯ ಬಹುತೇಕ ಖಾಸಗಿ ಸಂಸ್ಥೆಯವರು ಡೊನೇಷನ್ ಪಡೆಯುತ್ತಿದ್ದಾರೆ. ಜಿಲ್ಲಾಧಿಕಾರಿಯವರು ಅವಕಾಶ ನೀಡಿದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ದೂರುದಾರರ ಗೌಪ್ಯತೆ ಕಾಪಾಡಿದರೆ, ಪಾಲಕರನ್ನು ಕಚೇರಿಗೆ ಕರೆತಂದು ಪುರಾವೆ ಸಮೇತ ದೂರು ಕೊಡಿಸಲಾಗುವುದು.

— ಬಸವರಾಜ ಎಸ್., ಎಸ್‌ಎಫ್‌ಐ ಜಿಲ್ಲಾಧ್ಯಕ್ಷ


"

ಶಿಕ್ಷಣವು ವ್ಯಾಪಾರದ ವಸ್ತುವಾಗಿದೆ. ಶಿಕ್ಷಣ ನೀಡಬೇಕಾದ ಹಲವು ಶಾಲೆಯವರು ಶೂ, ಸಾಕ್ಸ್, ಪುಸ್ತಕಗಳನ್ನು ಮಾರುಕಟ್ಟೆಗಿಂತ ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.

— ಬಸವರಾಜ ಪೂಜಾರ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net