ವಿಜ್ಞಾನ, ತಂತ್ರಜ್ಞಾನ ಮನುಷ್ಯನ ಅವಿಭಾಜ್ಯ ಅಂಗ; ದೇಶದ ಅಭಿವೃದ್ಧಿಗೆ ಪೂರಕ; ಜಿಗ್ಯಾಸ ವಿಜ್ಞಾನಿ- ವಿದ್ಯಾರ್ಥಿ ಸಂಪರ್ಕ ಸಮಾರಂಭದಲ್ಲಿ ಡಿಸಿ ದಾನಮ್ಮನವರ ಹೇಳಿಕೆ

scientist, students, meet
scientist, students, meet
Published on
ಹಾವೇರಿ: ವಿಜ್ಞಾನ ಮತ್ತು ತಂತ್ರಜ್ಞಾನವು ಮನುಷ್ಯನ ಜೀವನದ ವಿಭಾಜ್ಯ ಅಂಗವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಸಿಎಸ್‌ಐಆರ್- ನ್ಯಾಶನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ವಿದ್ಯಾಶಿಲ್ಪ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಜಿಗ್ಯಾಸ್ ವಿದ್ಯಾರ್ಥಿ- ವಿಜ್ಞಾನಿಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ನಮ್ಮ ಜೀವನ ಶೈಲಿ ಹೇಗಿರುತ್ತದೆ ಎನ್ನುವುದನ್ನು ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ಧರಿಸುತ್ತದೆ. ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ದಿನನಿತ್ಯದ ಜೀವನದ ಮೇಲೆ ಅದು ಪರಿಣಾಮ ಬೀರುತ್ತದೆ. ರೋಗಗಳನ್ನು ಪತ್ತೆ ಹಚ್ಚಲು, ಚಿಕಿತ್ಸೆ ನೀಡಲು ಸಹಕಾರಿ ಆಗುತ್ತದೆ. ಸಮೂಹ ಸಂವಹನದ ಮೂಲಕ ಸಂಪರ್ಕ ಸಾಧಿಸಿ ಇಡೀ ಜಗತ್ತು ಒಂದು ಹಳ್ಳಿಯಂತಾಗಿದೆ ಎಂದರು.
ಇಂದು ವಿಜ್ಞಾನ ಮತ್ತು ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಭಾವ ಬೀರಿದೆ. ಆರೋಗ್ಯ, ಶಿಕ್ಷಣ, ಸಾರಿಗೆ, ಟೆಲಿ ಕಮ್ಯುನಿಕೇಷನ್, ಕೃಷಿ, ಉತ್ಪಾದನೆ ವಲಯ, ಕಾರ್ಮಿಕ ವಲಯಗಳ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಅವಲಂಭಿತವಾಗಿದೆ. ಇದು ಪ್ರತಿ ಮನುಷ್ಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿ ಮನಷ್ಯ ಜೀವನಮಟ್ಟ ಸುಧಾರಣೆ ಮಾಡುತ್ತದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಭಾವ ಬೀರಿದೆ. ಆರೋಗ್ಯ ಕ್ಷೇತ್ರದಲ್ಲಿ ಎಂಆರ್‌ಐ ಸ್ಕಾೃನಿಂಗ್, ರೋಬೊಟಿಕ್ ಸರ್ಜರಿ, ಲಸಿಕೆ, ಇವು ಮನುಷ್ಯನ ಆಯುಷ್ಯ ಹೆಚ್ಚಿಸಲು ಸಹಕರಿಯಾಗಿದೆ. ಮೊದಲು ಮಾನವನ ಜೀವಿತಾವಧಿಯು 35 ವರ್ಷಕ್ಕೆ ಸೀಮಿತವಾಗಿತ್ತು. ಇಂದು ವಿಜ್ಞಾನ ಮತ್ತು ತಂತ್ರಜ್ಞಾವನ್ನು ಆರೋಗ್ಯ ಕ್ಷೇತ್ರದಲ್ಲಿ ಬಳಸಿಕೊಂಡಿರುವ ಪರಿಣಾಮ ಮಾನವನ ಜೀವಿತಾವಧಿಯನ್ನು 70 ವರ್ಷಕ್ಕೆ ಹೆಚ್ಚಿಸಿದೆ. ಅರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಸಂಶೋಧನೆಗಳು ಇದಕ್ಕೆ ಮೂಲ ಕಾರಣವಾಗಿದೆ ಎಂದರು.
ಸಾರಿಗೆ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ. ಆಟೋನಮಿ ಟೆಕ್ನಾಲಜಿ, ಹೈಪರ್ ಟೆಕ್ನಾಲಜಿ ಮೂಲಕ ಎಲೆಕ್ಟ್ರಿಕಲ್ ಬೈಕ್ ಮತ್ತು ಬಸ್‌ಗಳು ಬಂದಿದ್ದು ಸಾರಿಗೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ಅಮೇರಿಕ ನಾಸಾದ ಮೂಲಕ ಚಂದ್ರನಲ್ಲಿ ವಾಸಿಸಲು ಪ್ರಯತ್ನ ಮಾಡುತ್ತಿದೆ. ಆಹಾರ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಇದಕ್ಕೆಲ್ಲ ಮೂಲ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಇಲ್ಲದಿದ್ದರೆ ಜಗತ್ತು ಯಾವ ರೀತಿ ಇರುತ್ತಿತ್ತು ಎಂದು ಅಂದಾಜಿಸುವುದೂ ಕಷ್ಟ ಎಂದರು.
ಸಿಎಸ್‌ಐಆರ್- ಎನ್‌ಎಎಲ್ ಮುಖ್ಯ ವಿಜ್ಞಾನಿ ಡಾ.ಗೀರಿಶ ಯಾನಮಶೆಟ್ಟಿ ಮಾತನಾಡಿ, ಜಿಗ್ಯಾಸ್ ಅತ್ಯಂತ ವಿಶಿಷ್ಟವಾದ ಕಾರ್ಯಕ್ರಮ. ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ವಿಜ್ಞಾನಿ ಎಂದರೆ ಯಾರು? ಒಂದು ನಿಗದಿತ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡು ಸಾಕಾರಗೊಳಿಸುವುದಾಗಿದೆ. 6ರಿಂದ 12ನೇ ತರಗತಿ ವಿದ್ಯಾರ್ಥಿಗಳನ್ನು ಜಿಗ್ಯಾಸ್ ಗೆ ಆಯ್ಕೆ ಮಾಡಲಾಗುತ್ತದೆ. ವಿಜ್ಞಾನದ ಕುರಿತು ಉತ್ತೇಜನ ನೀಡುತ್ತೇವೆ. ಇದರಿಂದ ವಿದ್ಯಾರ್ಥಿಗಳಿಗೆ ಸುಮಾರು ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಮ್ರತೆ ಇವುಗಳನ್ನು ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಏರೋ ಕ್ವಿಜ್, ಪ್ರಾಯೋಗಿಕ ವೈಜ್ಞಾನಿಕ ಕಲಿಕೆ, ಪೇಪರ್ ಏರ್ ಕ್ರಾೃಫ್ಟ್ ಸ್ಪರ್ಧೆ, ಡ್ರೋಣ್ ಪರಿಚಯ ಸೇರಿದಂತೆ ವಿವಿಧ ಪ್ರಾಯೋಗಿಕ ಕಲಿಕೆಯಲ್ಲಿ ಮಕ್ಕಳು ಸಂತಸಪಟ್ಟರು.
ಕಾರ್ಯಕ್ರಮದಲ್ಲಿ ಸಿಎಸ್‌ಐಆರ್-ಎನ್‌ಎಎಲ್ ಹಿರಿಯ ವಿಜ್ಞಾನಿಗಳಾದ ಡಾ.ವಿ.ಪಿ.ಎಸ್.ನಾಯ್ಡು, ಡಾ.ಶಿವರಾಮ ಬಿ.ಎಸ್., ಡಿಡಿಪಿಐ ಮೋಹನ ದಂಡಿನ, ಬಿಇಒ ಎಂ.ಎಚ್.ಪಾಟೀಲ, ವಿದ್ಯಾಶಿಲ್ಪ ಇಂಟರ್ ನ್ಯಾಶನಲ್ ಸ್ಕೂಲ್ ಕಾರ್ಯದರ್ಶಿ ಸೌಮ್ಯ ಮಾಳಿ, ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
"

ಜಿಗ್ಯಾಸ್ ಮುಖ್ಯ ಉದ್ದೇಶ ವಿಜ್ಞಾನಿಗಳ ಜತೆ ವಿದ್ಯಾರ್ಥಿಗಳನ್ನು ಬೆರೆಸುವುದು. ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸುವುದಾಗಿದೆ. ಜಿಗ್ಯಾಸ್ ಮೂಲಕ ವಿವಿಧ ಪ್ರಯೋಗಾಲಾಯ, ಸ್ಪರ್ಧೆ, ವಸ್ತು ಪ್ರದರ್ಶನ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಪ್ರಯೋಗದ ಮಹತ್ವವನ್ನು ತೋರಿಸಿ, ಅವರಲ್ಲಿ ವಿಜ್ಞಾನದ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದರಿಂದ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚು ಕುತೂಹಲ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net