ಗ್ಯಾರಂಟಿ, ನರೇಗಾ ಹಣ ಸಾಲಕ್ಕೆ ಜಮೆ; ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ; ಸಭೆಯಲ್ಲಿ ಜಿಲ್ಲಾಧಿಕಾರಿ ಎದುರು ಆರೋಪ

Haveri, DC, SC, St, Jagruthi Samiti, Meeting,
Haveri, DC, SC, St, Jagruthi Samiti, Meeting,
Published on
ಹಾವೇರಿ: ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಗ್ಯಾರಂಟಿ, ನರೇಗಾ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಯ ಹಣ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಈಗಗಾಲೇ ಗುರಿ ಸಾಧಿಸಲಾಗಿದೆ ಎಂದು ಹಲವಾರು ಕಾರಣಗಳನ್ನು ನೀಡಿ, ಸಾಲ ಮಂಜೂರಾತಿ ಮಾಡುತ್ತಿಲ್ಲ ಎಂದು ಎಸ್‌ಸಿ, ಎಸ್‌ಟಿ ಜಿಲ್ಲಾ ಜಾಗೃತ ಸಮಿತಿ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರು ಆರೋಪಿಸಿದರು.
ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಎದುರು ಸಮಿತಿ ಸದಸ್ಯರು ಬ್ಯಾಂಕ್‌ಗಳ ಸಮಸ್ಯೆಗಳನ್ನು ವಿವರಿಸಿದರು.
ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಸುತ್ತಿರವ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಬ್ಯಾಂಕಿಗೆ ಬರುವ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ರೀತಿ ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ವಿವಿಧ ನಿಗಮಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸಾಲಕ್ಕೆ ವಿವಿಧ ಯೋಜನೆಗಳ ಹಣ ಜಮೆಮಾಡಿಕೊಳ್ಳದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವೈದ್ಯಕೀಯ ಕಾಲೇಜ್‌ನಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿಯ ಹಾಗೂ ಪ. ಪಂಗಡದ ಎಷ್ಟು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ಪೈಕಿ ಎಷ್ಟು ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ನೀಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡುವಂತೆ ಸದಸ್ಯರು ಪ್ರಶ್ನಿಸಿದರು. ರೋಸ್ಟರ್ ಅನುಸಾರ ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ವೈದ್ಯಕೀಯ ಕಾಲೇಜ್‌ನ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 465 ನ್ಯಾಯಬೆಲೆ ಅಂಗಡಿಗಳ್ಳಿದ್ದು, ಈ ಪೈಕಿ 24 ಅಂಗಡಿಗಳು ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದವರಿಗೆ ಸೇರಿವೆ. ನಿಯಮಾನುಸಾರ 84 ಪರಿಶಿಷ್ಟ ಜಾತಿ ಹಾಗೂ ಪ. ಪಂಗಡದವರಿಗೆ ನೀಡಲಾಗುವುದು. 500 ಪಡಿತರ ಚೀಟಿಗಳಿಗೆ ಒಂದು ನ್ಯಾಯಬೆಲೆ ಅಂಗಡಿ ಇರಬೇಕು. ಹಾಗಾಗಿ, ಬರುವ ದಿನಗಳಲ್ಲಿ ಹೆಚ್ಚಿನ ಪಡಿತರ ಚೀಟಿ ಹೊಂದಿರುವ ಗ್ರಾಮಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಆಹಾರ ನಾಗರಿಕರ ಸರಬರಾಜು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಏಪ್ರಿಲ್ -2026ರಿಂದ ಜೂನ್‌ವರೆಗೆ 16 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪರಿಶಿಷ್ಟ ಜಾತಿಯ 11 ಹಾಗೂ ಪರಿಶಿಷ್ಟ ಪಂಗಡದ 9 ಸಂತ್ರಸ್ಥರು ಸೇರಿ 20 ಜನರಿಗೆ ಐದು ಲಕ್ಷ ಪರಿಹಾರ ಮಂಜೂರು ಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿಜ್‌ಕುಮಾರ, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಜಿಲ್ಲಾ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಮಠ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಸಂಜಯಗಾಂಧಿ ಸಂಜೀವಣ್ಣನವರ, ಎನ್.ಎಂ.ಗಾಳೆಮ್ಮನವರ, ರಮೇಶ ಕೊರವರ, ಇತರರು ಉಪಸ್ಥಿತರಿದ್ದರು.
ಜೆಜೆಎಂನಲ್ಲಿ ಅಕ್ರಮ ಆರೋಪ
ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಶಿವರಾಜ ಹರಿಜನ ಹಾಗೂ ಬಸವರಾಜ ಹೆಡಿಗ್ಗೊಂಡ ಮಾತನಾಡಿ, ಜೆ.ಜೆ.ಎಂ. ಕಾಮಗಾರಿ ಸರಿಯಾಗಿ ಅನುಷ್ಠಾನ ಮಾಡಿಲ್ಲ, ವಿವಿಧ ಗ್ರಾಮಗಳಲ್ಲಿ ನೀರು ಸಹ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಮೂರು ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಯಾವ ಪ್ರದೇಶಗಳಲ್ಲಿ ಸಮಸ್ಯೆ ಇದೆ ಅಂತಹ ಪ್ರದೇಶಗಳಲ್ಲಿ ಗ್ರಾಮ ಮಟ್ಟದಿಂದಲೇ ಸರಿಪಡಿಸುವ ಕೆಲಸ ಮಾಡುತ್ತದೆ. ಬರುವ ದಿನಗಳಲ್ಲಿ ಸರಿಯಾಗಿ ನೀರು ಪೂರೈಸುವ ಕೆಲಸ ಮಾಡಲಾಗುವುದು ಎಂದು ಡಿಸಿ ತಿಳಿಸಿದರು.
ತೆರಿಗೆ ಹಣದಲ್ಲಿ ಸಂಬಳ ಕೊಡಿ
ಗುತ್ತಲ ಪಟ್ಟಣ ಪಂಚಾಯತಿಯ ಪೌರಕಾರ್ಮಿಕರ ವೇತನ ಬಾಕಿ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ, ತೆರಿಗೆ ವಸೂಲಿ ಹಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಸುತ್ತಿರುವ ಪೌರ ಕಾರ್ಮಿಕರ ವೇತನ ಪಾವತಿಗೆ ಮೊದಲ ಆದ್ಯತೆ ನೀಡಬೇಕು. ಜತೆಗೆ ಕರ ವಸೂಲಿಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net