ಬುದ್ಧನ ತತ್ವಗಳಲ್ಲಿ ಒಂದು ಅಕ್ಷರವೂ ಸುಳ್ಳಿಲ್ಲ; ಭಗವಾನ್ ಬುದ್ಧ ಜಯಂತ್ಯುತ್ಸವದಲ್ಲಿ ಜಾನಪದ ವಿವಿ ಕುಲಪತಿ ಡಾ.ಟಿ.ಎಂ.ಭಾಸ್ಕರ ಹೇಳಿಕೆ

Haveri, DC Office, Buddha Jayanti,
Haveri, DC Office, Buddha Jayanti,
Published on
ಹಾವೇರಿ: ಬುದ್ಧನ ಜೀವನವು ಸಂಪೂರ್ಣವಾಗಿ ನೈತಿಕತೆಯ ಮೇಲೆ ನಿಂತಿದೆ. ಅಲ್ಲಿ ಮೋಸ, ಹಿಂಸೆಗೆ ಅವಕಾಶವಿಲ್ಲ. ಬುದ್ಧನ ಜೀವನ ಹಾಗೂ ತತ್ವಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಬುದ್ಧನ ತತ್ವಗಳಲ್ಲಿ ಒಂದು ಅಕ್ಷರವೂ ಸುಳ್ಳಿಲ್ಲ ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ ಹೇಳಿದರು.
ನಗರದ ಪ್ರವಾಸಿ ತಾಣ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡುತ್ತ ಅವರು ಮಾತನಾಡಿದರು.
ಬೌದ್ಧ ಧರ್ಮದಲ್ಲಿ ಹಿಂಸೆ, ಮೋಸಕ್ಕೆ ಅವಕಾಶವಿಲ್ಲದೆ ನೈತಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇದೇ ಕಾರಣಕ್ಕೆ ಕೇವಲ ಖಡ್ಗದಿಂದ ಜಗತ್ತನ್ನು ಆಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತಿದ್ದರಿಂದಲೇ ಸಾಮ್ರಾಟ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದನು. ಬುದ್ಧನು ಅಹಿಂಸೆ, ನೈತಿಕತೆ ಮತ್ತು ಸತ್ಯದ ಮಾರ್ಗವನ್ನು ಸಾರಿದ ಮಹಾನ್ ತತ್ವಜ್ಞಾನಿ ಎಂದು ವಿವರಿಸಿದರು.
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ಸರ್ಕಾರವು ಸದುದ್ದೇಶದಿಂದ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ಇವು ಕೇವಲ ಒಂದು ಜಾತಿಗೆ ಸೀಮಿತವಾಗದೇ ಎಲ್ಲರೂ ಒಗ್ಗೂಡಿ ಆಚರಿಸಿದಾಗ ಮಾತ್ರ ಬುದ್ಧನ ಅಹಿಂಸೆ ಮತ್ತು ಶಾಂತಿ ತತ್ವಗಳು ಸಮಾಜಕ್ಕೆ ತಲುಪಲು ಸಾಧ್ಯ ಎಂದರು.
ಇಂದಿನ ಕಾಲಘಟ್ಟದಲ್ಲಿ ಜಯಂತಿಗಳು ಕೇವಲ ಸಾಂಕೇತಿಕ ಆಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಬುದ್ಧ ಯಾರೋ ಒಬ್ಬರಿಗೆ ಸೇರಿದವರಲ್ಲ ಅವರು ಇಡೀ ಜಗತ್ತಿಗೆ ದಾರಿದೀಪ. ಜಾತಿ-ಮತಗಳ ಬೇಲಿ ಹಾಕಿ ಮಹಾಪುರುಷರನ್ನು ಹಂಚಿಕೊಳ್ಳುವ ಬದಲು ಅವರ ವಿಚಾರಧಾರೆಗಳನ್ನು ಅರಿಯುವತ್ತ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಜಂತಾ-ಎಲ್ಲೋರಾದಂತಹ ಗುಹೆಗಳು ಬುದ್ಧನ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿವೆ. ಅಂದಿನ ಕಾಲದ ಯಾಗ-ಯಜ್ಞಗಳ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸೆಯನ್ನು ತಡೆಯಲು ಬುದ್ಧ ಅಹಿಂಸೆಯ ಮಾರ್ಗ ತೋರಿದರು. ರೋಹಿಣಿ ನದಿಯ ನೀರಿಗಾಗಿ ನಡೆದ ಸಂಘರ್ಷದ ವೇಳೆ ಸಿದ್ಧಾರ್ಥನು ತೋರಿದ ಶಾಂತಿ ಮತ್ತು ಸೋದರತೆಯ ಗುಣಗಳೇ ಇಂದು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಲನೀತಿ ರೂಪಿಸಲು ಪ್ರೇರಣೆಯಾದವು ಎಂದರು.
ಬುದ್ಧ, ಬಸವ ಮತ್ತು ಅಂಬೇಡ್ಕರ್ ಈ ಮೂವರು ಮಹಾನ್ ಮಾನವತಾವಾದಿಗಳು ಸಮಾಜದ ಕಂದಾಚಾರಗಳನ್ನು ತೊಡೆದುಹಾಕಿದ ಆಶಾಕಿರಣಗಳು ಎಂದು ಬಣ್ಣಿಸಿದರು. ಹಾಗೆಯೇ ಬೌದ್ಧ ಧರ್ಮದ ಅಹಿಂಸಾ ತತ್ವ, ಸಹೋದರತೆ ಹಾಗೂ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ತಹಸೀಲ್ದಾರ್ ಕೆ.ಶರಣಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಪೃಥ್ವಿರಾಜ ಬೆಟಗೇರಿ, ಸಂಜಯಗಾಂಧಿ ಸಂಜೀವಣ್ಣವರ, ಬಸವರಾಜ ಹೆಡಿಗೊಂಡ, ಸುನೀಲ ಬೆಟಗೇರಿ, ಸಮುದಾಯದ ಮುಖಂಡರು, ಗಣ್ಯರು, ಬುದ್ಧನ ಅನುಯಾಯಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net