ಮಹಿಳೆಯರಿಗೆ ಸಮಾನ ಅವಕಾಶ ಒದಗಿಸಬೇಕು; ದಾನೇಶ್ವರಿ ದೇಗುಲದ ಮಹಿಳಾ ದಿನಾಚರಣೆಯಲ್ಲಿ ಡಾ.ಪುಷ್ಪವತಿ ಶೆಲವಡಿಮಠ ಹೇಳಿಕೆ

daneshwari nagar, womens day,
daneshwari nagar, womens day,
Published on
ಹಾವೇರಿ: ಮಹಿಳೆಯರು ಇಂದು ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಇದ್ದರೂ ಇಂದಿಗೂ ಸಮಾಜದಲ್ಲಿ ಹೆಣ್ಣು ಮಕ್ಕಳು ಅನೇಕ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ಕೇವಲ ಒಂದು ದಿನದ ಆಚರಣೆಯಿಂದ ಮಹಿಳೆಯರ ಸ್ಥಿತಿ ಬದಲಾಗುವುದಿಲ್ಲ. ಮಹಿಳೆಯರಿಗೆ ಶಿಕ್ಷಣ, ಸಮಾನ ಅವಕಾಶ ಮತ್ತು ಸುರಕ್ಷತೆ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಉಪನ್ಯಾಸಕಿ ಡಾ.ಪುಷ್ಪಾವತಿ ಶೆಲವಡಿಮಠ ಸಲಹೆ ನೀಡಿದರು.
ಹಾವೇರಿ ಬಸವ ಬಳಗ, ಶ್ರೀ ದಾನೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ನಗರದ ದಾನೇಶ್ವರಿ ದೇಗುಲದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತರಾಗಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ವಿಜ್ಞಾನ, ಕ್ರೀಡೆ, ರಾಜಕೀಯ, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಚಾಪು ಮೂಡಿಸುತ್ತಿದ್ದಾರೆ. ಕಿತ್ತೂರ ರಾಣಿ ಚನ್ನಮ್ಮ, ಒನಕೆ ಓಬವ್ವರಿಂದ ಹಿಡಿದು ಇಂದಿನ ಸುಧಾ ಮೂರ್ತಿ, ಕಲ್ಪನಾ ಚಾವ್ಲಾರವರೆಗೆ ಅನೇಕರು ನಮಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೋಭಾತಾಯಿ ಮಾಗಾವಿ ಮಾತನಾಡಿ, ಹೆಣ್ಣು ಅಬಲೆಯಲ್ಲ ಆಕೆ ಸಬಲೆ. ಒಬ್ಬ ಮಹಿಳೆಯು ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಜೀವನದ ಪ್ರತಿ ಹಂತದಲ್ಲೂ ಪ್ರೀತಿ ಮತ್ತು ಸಹನೆಯ ಸಾಕಾರ ರೂಪವಾಗಿದ್ದಾಳೆ. ಆಕೆಯ ಸಾಧನೆ ಗುರುತಿಸಲು ಈ ದಿನ ಬಹಳ ಮಹತ್ವವಾದದ್ದು ಎಂದರು.
ಸಮಾರಂಭದಲ್ಲಿ ಮಹಿಳಾ ಬಸವ ಬಳಗದ ಸದಸ್ಯರಾದ ಸುಂದರಕ್ಕ ತುಪ್ಪದ, ಗಿರಿಜಕ್ಕ ತಾಂಡೂರ, ಅನುಸೂಯ ನಂದಿವಾಡ, ರಾಜೇಶ್ವರಿ ಯಾಳಮಲ್ಲಿ, ಜಯಶ್ರೀ ಮರ್ತೂರು, ಉಮಾದೇವಿ ವಾಲಿಶೆಟ್ಟರ್, ಶಾಂತಕ್ಕ ದಾವಣಗೆರೆ, ಶಾಂತಕ್ಕ ಮಡಿವಾಳ, ಶೋಭಾ ತಾಂಡೂರ, ನಿಶಾ ಮಾಗಾವಿ, ಪುಷ್ಪಮ್ಮ ಹೊಸೂರ, ನೇತ್ರಾವತಿ ಪಾಟೀಲ, ಇತರರಿದ್ದರು.
ಸನ್ಮಾನ :
ಸಮಾರಂಭದಲ್ಲಿ ಡಾ.ಪುಷ್ಪಾವತಿ ಶೆಲವಡಿಮಠ, ಲತಾ ಮಂಜಪ್ಪ, ಪ್ರೇಮಕ್ಕ ಹರವಿ, ಶಿವಬಸಮ್ಮ ಲಕ್ಕಣ್ಣನವರ, ಅನ್ನಪೂರ್ಣಮ್ಮ ಕೊಳಕೂರ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net