ಒಳಮೀಸಲಾತಿ ಜಾರಿ ಮಾಡಿ ನೋಟಿಫಿಕೇಶನ್ ಹೊರಡಿಸಿ; ರಾಜ್ಯ ಸರ್ಕಾರಕ್ಕೆ ದಲಿತ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಆಗ್ರಹ

dalit, madigara sangha,
dalit, madigara sangha,
Published on
ಹಾವೇರಿ: ರಾಜ್ಯ ಸರ್ಕಾರ ಈ ಕೂಡಲೇ ದಲಿತ ಸಮುದಾಯದ ಒಳ ಮೀಸಲಾತಿ ಜಾರಿಗೊಳಿಸಬೇಕು. ಶೇ.15ರಷ್ಟು ಅಥವಾ ಶೇ.17ರಷ್ಟು ಯಾವುದೇ ಮೀಸಲಾತಿ ಇರಲಿ, ಮೊದಲು ಒಳ ಮೀಸಲಾತಿ ಘೋಷಿಸಬೇಕು. ನಂತರವೇ, 56 ಸಾವಿರ ಉದ್ಯೋಗಗಳ ನೇಮಕಾತಿಗೆ ನೋಟಿಫಿಕೇಶನ್ ಹೊರಡಿಸಬೇಕು ಎಂದು ಬಿಜೆಪಿ ಹಾಗೂ ದಲಿತ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೇ ಬಿಟ್ಟಿದ್ದು ಎಂದು ಈಗಾಗಲೇ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ 56 ಸಾವಿರ ಹುದ್ದೆಗಳ ನೇಮಕಾತಿಗೆ ಮುಂದಾದರೆ, ಮತ್ತೆ ಕಾನೂನು ತೊಡಕು ಉಂಟಾಗುತ್ತದೆ. ಆಗ ಮತ್ತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ, ಪೂರ್ಣಗೊಳ್ಳುವವರೆಗೆ ಸರ್ಕಾರ ಕಾಲಹರಣ ಮಾಡುವ ದುರುದ್ದೇಶ ಹೊಂದಿದೆ. ಇದಕ್ಕೆ ಆಸ್ಪದ ನೀಡದೇ ಮೊದಲು ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮೂರು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆದಿದೆ. ಸಮುದಾಯದ ಹೋರಾಟದ ಹಿನ್ನೆಲೆಯಲ್ಲಿ ಸದಾಶಿವ ಆಯೋಗ ರಚನೆ ಮಾಡಲಾಯಿತು. ಆಯೋಗ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವರದಿ ತಯಾರಿಕೆಗಾಗಿಯೇ ಸರ್ಕಾರಗಳು 100 ಕೋಟಿ ಖರ್ಚು ಮಾಡಿವೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಬಗ್ಗೆ ಆಸಕ್ತಿ ತೋರಿತು. ಶೇ.17ರಷ್ಟು ಮೀಸಲಾತಿ ನೀಡಲು ಸಂಪುಟ ಸಭೆ ತೀರ್ಮಾನ ಮಾಡಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಸಕ್ತಿ ತೋರದೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ಎಚ್.ಆಂಜನೇಯ, ನಾಗರಾಜ ಎಂ. ಇತರರಿದ್ದರು.
ಮಾದಿಗರ ವಿರೋಧಿ ಸರ್ಕಾರ
ಒಳ ಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧರಿದ್ದಾರೆ. ಆದರೆ, ಅವರ ಕೆಲ ಹಿಂಬಾಲಕರು ಜಾರಿಗೆ ಬಿಡುತ್ತಿಲ್ಲ. ಹಾಗಾಗಿ, ಇದು ಮಾದಿಗರ ವಿರೋಧಿ ಸರ್ಕಾರ. ಪ್ರಸ್ತುತ ಸರ್ಕಾರದ ಮಾದಿಗ ಸಮುದಾಯದ ಸಚಿವರಾದ ಆರ್.ಬಿ.ತಿಮ್ಮಾಪುರ ಮತ್ತು ಕೆ.ಎಚ್.ಮುನಿಯಪ್ಪನವರು ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ವಿರೋಧಿಸಿದ್ದು, ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರಗೆ ಬರಬೇಕು ಎಂದು ದಲಿತ ಮುಖಂಡ ಡಿ.ಎಸ್.ಮಾಳಗಿ ಆಗ್ರಹಿಸಿದರು. ಸಿದ್ದರಾಮಯ್ಯನವರು ಗಟ್ಟಿ ನಿರ್ಧಾರ ಮಾಡಿ ಒಳ ಮೀಸಲಾತಿ ಜಾರಿಗೊಳಿಸಬೇಕು. ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net