ಸತ್ಯನಾರಾಯಣ ಪೂಜೆ ಮೂಲಕ ಭಾವೈಕ್ಯತೆ ಸಂದೇಶ

ಸತ್ಯನಾರಾಯಣ ಪೂಜೆ ನೆರವೇರಿಸಿದ ದಂಪತಿ
ಸತ್ಯನಾರಾಯಣ ಪೂಜೆ ನೆರವೇರಿಸಿದ ದಂಪತಿ
Published on: 

ಹಾವೇರಿ: ಧರ್ಮ, ಜಾತಿ, ಆಚರಣೆಗಳ ಎಲ್ಲೆ ಮೀರಿ ಪರಸ್ಪರ ಗೌರವ ಹಾಗೂ ಸೌಹಾರ್ದತೆಯಿಂದ ಬದುಕುವ ಸಂದೇಶ ಸಾರುವ ನಿಟ್ಟಿನಲ್ಲಿ ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್‌ಪಿ ಸಮೀವುಲ್ಲಾ ಕೆ. ಹಾಗೂ ಅವರ ಪತ್ನಿ ಕುಟುಂಬ ಸಮೇತ ಠಾಣೆಗೆ ಆಗಮಿಸಿ ಹಿಂದೂ ಸಂಪ್ರದಾಯದಂತೆ ಸತ್ಯನಾರಾಯಣ ಪೂಜೆ ನೆರವೇರಿಸುವ ಮೂಲಕ ಇತರರಿಗೆ ಮಾದರಿಯಾದರು.

ಗಣೇಶೋತ್ಸವ ನಿಮಿತ್ತ ಪೊಲೀಸ್ ಠಾಣೆಯಲ್ಲಿಯೆ ವಿಶೇಷವಾಗಿ ಸತ್ಯನಾರಾಯಣ ಪೂಜೆ ಆಯೋಜಿಸಿ, ದಂಪತಿ ಸಮೇತ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ನಂತರ ಕುಟುಂಬದ ಸದಸ್ಯರೂ ಪ್ರಸಾದ ಸ್ವೀಕರಿಸಿದರು.

ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಾರ್ಯಸ್ಥಳದಲ್ಲಿ ಕುಟುಂಬ ಸಮೇತ ಸ್ಥಳೀಯ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿರುವುದು ಗಮನ ಸೆಳೆಯಿತು. ಈ ಮೂಲಕ ಎಲ್ಲ ಧರ್ಮಗಳ ಆಚರಣೆಗಳನ್ನು ಗೌರವಿಸುವುದು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಬದುಕುವುದು ಎಂಬ ಭಾವೈಕ್ಯತೆಯ ಸಂದೇಶ ಸಾರಿದರು.

ಪೊಲೀಸ್ ಇಲಾಖೆ ಕೇವಲ ಕಾನೂನು-ಸುವ್ಯವಸ್ಥೆ ಕಾಪಾಡುವ ಸಂಸ್ಥೆಯಾಗಿರದೆ, ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಪರಸ್ಪರ ಗೌರವದ ವಾತಾವರಣ ನಿರ್ಮಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಕ್ಕೆ ಈ ಪೂಜಾ ಕಾರ್ಯಕ್ರಮ ಸಾಕ್ಷಿಯಾಯಿತು.