ನಿಮ್ಮ ಬ್ಯಾಂಕ್ ಖಾತೆ ಎಷ್ಟು ಸೇಫ್ ?; ಯಾರದ್ದೋ ಅಕೌಂಟ್‌ನಿಂದ ಕೋಟ್ಯಂತರ ವಹಿವಾಟು ಮಾಡುವ ದಂಧೆಕೋರರು; ಸೈಬರ್ ವಂಚಕರಿಂದ ಎಚ್ಚರ

Cyber Crime
Cyber Crime
Published on
ಹಾವೇರಿ: ಹೆಚ್ಚಿನ ಲಾಭಾಂಶ, ಕಮಿಷನ್, ಸಾಲ, ಮತ್ತಿತರ ಆಮಿಷ ಒಡ್ಡುವ ಮೂಲಕ ಅಮಾಯಕ ಜನರ ಬ್ಯಾಂಕ್ ಖಾತೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಆ ಖಾತೆಯ ಮೂಲಕ ಕೋಟ್ಯಂತರ ರೂ. ವಹಿವಾಟು ನಡೆಸಿ, ನಂತರ ಖಾತೆದಾರರು ಪೊಲೀಸ್ ಠಾಣೆ ಹತ್ತುವಂತೆ ಮಾಡುತ್ತಿರುವ ಪ್ರಕರಣಗಳು ಜಿಲ್ಲೆ ಸೇರಿದಂತೆ ದೇಶದ ಹಲವೆಡೆ ವರದಿಯಾಗಿದ್ದು, ಇದು ಬ್ಯಾಂಕ್ ಗ್ರಾಹಕರಲ್ಲಿ ತಳಮಳ ಶುರು ಮಾಡಿದೆ.
ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಳ್ಳುವ ಸೈಬರ್ ನಯವಂಚಕರು, ಇನ್ನಿಲ್ಲದ ಆಸೆ, ಆಮಿಷಯ ಒಡ್ಡಿ ಅಮಾಯಕರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಅವರ ಖಾತೆಗಳನ್ನು ವಶಪಡಿಸಿಕೊಂಡು, ತಮ್ಮ ಅವ್ಯವಹಾರಗಳಿಗೆ ಬಳಸಿಕೊಳ್ಳುತ್ತಾರೆ. ತಮ್ಮ ಕೆಲಸ ಮುಗಿಯುತ್ತಿದ್ದಂತೆ ಯಾರ ಕೈಗೂ ಸಿಗದೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಮಾಯವಾಗುತ್ತಾರೆ.
ದೆಹಲಿ, ಬೆಂಗಳೂರು ಮತ್ತೆಲ್ಲೋ ದೂರದಲ್ಲಿ ನಡೆಯುತ್ತಿದ್ದ ಇಂತಹ ಹಲವು ಪ್ರಕರಣಗಳು ಜಿಲ್ಲೆಯಲ್ಲೂ ದಾಖಲಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹೀಗೆ, ಜಿಲ್ಲೆಯ ಮಹಿಳೆಯೊಬ್ಬರು ಉದ್ಯಮ ಆರಂಭಿಸಲು ಸಾಲ ಪಡೆಯಲೆಂದು ಪರದಾಡುತ್ತಿದ್ದ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣವೊಂದರಲ್ಲಿ ‘ಲಿಗಸಿ ಲೋನ್ಸ್’ ಹೆಸರಿನ ನಕಲಿ ಕಂಪನಿ ಹೆಸರಲ್ಲಿ ಸೈಬರ್ ವಂಚಕರು ಸಾಲ ನೀಡುವುದಾಗಿ ಜಾಹೀರಾತು ನೀಡಿ ಪರಿಚಯಿಸಿಕೊಂಡಿದ್ದರು. ಇದನ್ನು ಕಂಡ ಮಹಿಳೆ ಆ ಜಾಹೀರಾತು ಮೂಲಕ ಸಂಪರ್ಕಿಸಿದಾಗ ಸಾಲ ಕೊಡುವುದಾಗಿ ನಂಬಿಸಿ, ಹಾವೇರಿ ನಗರದ ಬ್ಯಾಂಕ್ ಒಂದರಲ್ಲಿ ಚಾಲ್ತಿ ಖಾತೆ ತೆರೆಸಿದ್ದರು.
ಬಳಿಕ ಮಹಿಳೆಯ ಮೊಬೈಲ್ ಫೋನ್‌ನಲ್ಲಿ ‘ಪುಶ್‌ಬುಲೆಟ್’ ಎಂಬ ಆ್ಯಪ್ ಇನ್‌ಸ್ಟಾಲ್ ಮಾಡಿಸಿದ್ದರು. ಅದಕ್ಕೆ ಬೇಕಾದ ಯೂಸರ್ ನೇಮ್, ಪಾಸ್‌ವರ್ಡ್ ಎಲ್ಲ ಕ್ರಿಯೇಟ್ ಮಾಡಿಸಿ, ಅದಕ್ಕೆ ಆರೋಪಿತರು ತಮ್ಮ ಮೊಬೈಲ್ ಸಂಖ್ಯೆ ನೀಡಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಮಹಿಳೆಯ ಮೊಬೈಲ್‌ಗೆ ಒಟಿಪಿ ಬರದಂತೆ ನೋಡಿಕೊಂಡಿದ್ದರು.
ಬಳಿಕ ನಾಲ್ಕು ದಿನದಲ್ಲಿ 1.74 ಕೋಟಿ ರೂ. ಹಣಕಾಸು ವರ್ಗಾವಣೆ ಮಾಡಿಕೊಂಡು ನಂತರ ಆ ಹಣವನ್ನು ಆರ್‌ಟಿಜಿಎಸ್ ಹಾಗೂ ಐಎಂಪಿಎಸ್ ಮೂಲಕ ವರ್ಗಾಯಿಸಿಕೊಂಡು ಮಹಿಳೆಗೆ ವಂಚಿಸಿದ್ದಾರೆ. ಬಳಿಕ ಈ ವಿಷಯ ತಿಳಿದ ಮಹಿಳೆ ಈಗ ಸೈಬರ್ ಕ್ರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಲ್ವಾ ಮಾರಲು ಬಂದು ವಂಚನೆ !
ಕೇರಳ ಮೂಲದಿಂದ ಜಿಲ್ಲೆಗೆ ಹಲ್ವಾ ಮಾರಾಟ ಮಾಡಲು ಬಂದಿದ್ದ ಆರೋಪಿಯೊಬ್ಬ ಗ್ರಾಹಕರನ್ನು ಪರಿಚಯ ಮಾಡಿಕೊಂಡು ಇಲ್ಲಸಲ್ಲದ ಸುಳ್ಳು ಹೇಳಿ ನಂಬಿಸಿ, ವಂಚಿಸಿದ ಕುರಿತು ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
ಕೇರಳ ಮೂಲದ ವ್ಯಕ್ತಿ ಹಲ್ವಾ ಮಾರಾಟಕ್ಕೆಂದು ಬಂಕಾಪುರಕ್ಕೆ ಬಂದಿದ್ದ. ಈ ವೇಳೆ ನನ್ನ ಮಗ ಕಾನೂನು ಬದ್ಧವಾಗಿ ಬಿಟ್ ಕಾಯಿನ್ ಟ್ರೇಡಿಂಗ್ ಮಾಡುತ್ತಿದ್ದು, ಅದರಿಂದ ಬಂದ ಲಾಭಾಂಶದ ಹಣವನ್ನು ಒಂದೇ ಖಾತೆಗೆ ಜಮೆ ಮಾಡಲು ಆಗುತ್ತಿಲ್ಲ. ನಿಮ್ಮ ಖಾತೆಯನ್ನು ಕೊಡಿ, ನಿಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಟ್ರೇಡಿಂಗ್‌ನಿಂದ ಬಂದ ಹಣದಲ್ಲಿ ನಿಮಗೆ ಕಮಿಷನ್ ಕೊಡುತ್ತೇನೆ ಎಂದು ನಂಬಿಸಿ, ಬಂಕಾಪುರದ ಐದು ಜನರಿಂದ 12 ಬ್ಯಾಂಕ್ ಪಾಸ್‌ಬುಕ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್ ಯೂಸರ್ ಐಡಿ, ಪಾಸ್‌ವರ್ಡ್ ಎಲ್ಲವನ್ನೂ ಪಡೆದುಕೊಂಡು ಕಾನೂನು ಬಾಹಿರವಾಗಿ ಆನ್‌ಲೈನ್ ವ್ಯವಹಾರ ಮಾಡಿ ವಂಚಿಸಿದ್ದಾರೆ. ಈ ಖಾತೆಗಳ ಮೂಲಕ ಕೋಟ್ಯಂತರ ರೂ. ಹಣಕಾಸು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಹಲ್ವಾ ಮಾರಲು ಬಂದವ ಹಲ್ವಾ ತಿನ್ನಿಸಿ ಹೋದಂತಾಗಿದೆ.
ಸೈಬರ್ ವಂಚಕರಿಂದ ಎಚ್ಚರ
- ನಿಮ್ಮ ಬ್ಯಾಂಕ್ ಖಾತೆಯನ್ನು ಆಗಾಗ ಪರಿಶೀಲಿಸುತ್ತಿರಿ
- ನಿಮ್ಮ ಖಾತೆಗೆ ನಿಮ್ಮದೇ ಮೊಬೈಲ್ ನಂಬರ್ ಲಿಂಕ್ ಆಗಿರಲಿ
- ಒಟಿಪಿ, ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿ ಯಾರಿಗೂ ತಿಳಿಸದಿರಿ
- ಖಾತೆಯಲ್ಲಿರುವ ಹಣ, ಬ್ಯಾಲೆನ್ಸ್ ಬಗ್ಗೆ ತಿಳಿದಿರಲಿ
- ಸೈಬರ್ ವಂಚನೆಗಳಿಗೆ ನಿಮ್ಮ ಬ್ಯಾಂಕ್ ಖಾತೆ ಬಳಸುತ್ತಾರೆ ಎಚ್ಚರ
- ಮೈಮರೆತರೆ ಎಫ್‌ಐಆರ್‌ನಲ್ಲೂ ಬರುತ್ತೆ ನಿಮ್ಮ ಹೆಸರು
"

ಯಾವುದೇ ಆಮಿಷಕ್ಕೆ ಒಳಗಾಗಿ ಯಾರ ಕೈಗೂ ನಿಮ್ಮ ಬ್ಯಾಂಕ್ ಪಾಸ್‌ಬುಕ್, ಎಟಿಎಂ, ಸಿಮ್ ಕಾರ್ಡ್, ಇತರ ವಿವರಗಳನ್ನು ಕೊಡಬಾರದು. ನಿಮ್ಮ ಬ್ಯಾಂಕ್ ಖಾತೆಯನ್ನು ನೀವೇ ನಿರ್ವಹಣೆ ಮಾಡಬೇಕು. ಯಾವುದೇ ಆಸೆಗೆ ಇನ್ನೊಬ್ಬರಿಗೆ ಒಪ್ಪಿಸಿದರೆ, ಅವರು ಮಾಡುವ ಅವ್ಯವಹಾರದಲ್ಲಿ ನೀವೂ ಪಾಲುದಾರರಾದಂತಾಗುತ್ತದೆ. ನಿಮ್ಮ ಮೇಲೂ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net