ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಅಂಗಡಿ ಸುಟ್ಟವನಿಗೆ ಏಳು ವರ್ಷ ಜೈಲು ಶಿಕ್ಷೆ; 35 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು

court, judgement
court, judgement
Published on
ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಜಾತಿ ನಿಂದನೆ ಮಾಡಿ, ಮಿಠಾಯಿ ಅಂಗಡಿ ಸುಟ್ಟು ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಾನಗಲ್ಲ ತಾಲೂಕಿನ ಹೊಂಕಣ ಗ್ರಾಮದ ಅಪರಾಧಿಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಹಾನಗಲ್ಲ ತಾಲೂಕು ಹೊಂಕಣ ಗ್ರಾಮದ ಶಿವಕುಮಾರ ಶಿವಬಸಪ್ಪ ದಳವಾಯಿ ಶಿಕ್ಷೆಗೀಡಾದ ಆರೋಪಿ.
ಇದೇ ಗ್ರಾಮದ ಕೃಷ್ಣಪ್ಪ ಅಂಗಡಿ ಮನೆಯ ಪಕ್ಕದಲ್ಲಿ ಮಿಠಾಯಿ ಅಂಗಡಿ ನಡೆಸುತ್ತಿದ್ದರು. ಮೇ 25, 2025ರಂದು ತಿಳವಳ್ಳಿ ಸಂತೆಗೆ ಮಿಠಾಯಿ ಮಾರಾಟ ಮಾಡಲು ತೆರಳಿದ್ದರು. ವಾಪಸ್ ಊರಿಗೆ ಬರುವಾಗ ಸಂಜೆ ಅಂಗಡಿ ಸಾಮಾನು ಸಾಗಿಸಲು ಬಂದ ವಾಹನದ ಚಾಲಕ ಶಿವಕುಮಾರಗೆ, ಯಾಕೆ ಇವತ್ತು ತುಂಬಾ ಲೇಟಾಗಿ ಬಂದಿದ್ದೀಯಾ ಎಂದು ಕೃಷ್ಣಪ್ಪ ಕೇಳಿದ್ದರು. ಇಷ್ಟಕ್ಕೆ ಸಿಟ್ಟಾದ ಶಿವಕುಮಾರ, ‘ನೀನ್ಯಾರು ಕೇಳುವುದಕ್ಕೆ. ನನ್ನ ಮಾಲೀಕರೇ ಕೇಳಲ್ಲ’ ಎಂದು ನಿಂದಿಸಿದ್ದ. ಹೀಗಾಗಿ, ಕೃಷ್ಣಪ್ಪ ಸಾಮಾನುಗಳನ್ನು ಶಿವಕುಮಾರನ ಗಾಡಿಯಿಂದ ಬೇರೆ ವಾಹನಕ್ಕೆ ಹಾಕಲು ಮುಂದಾಗಿದ್ದರು.
ಇದರಿಂದ ಆಕ್ರೋಶಗೊಂಡ ಶಿವಕುಮಾರ, ಕೃಷ್ಣಪ್ಪನಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದ. ನಂತರ 30 ಮೇ, 2025ರಂದು ನಸುಕಿನ ಜಾವ ಕೃಷ್ಣಪ್ಪನ ಮಿಠಾಯಿ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ. ಅಂಗಡಿಯಲ್ಲಿದ್ದ ಸುಮಾರು 15,000 ರೂ. ಮೌಲ್ಯದ ಸಾಮಗ್ರಿ ಸುಟ್ಟು ಹೋಗಿತ್ತು.
ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿಎಸ್‌ಪಿ ಗುರುಶಾಂತಪ್ಪ ತನಿಖೆ ನಡೆಸಿ, 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಶಿವಕುಮಾರ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎನ್.ಎಂ.ರಮೇಶ ಅವರು ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ, ಆದೇಶಿಸಿದ್ದಾರೆ.
ಸರ್ಕಾರಿ ಅಭಿಯೋಜಕಿ (ಪಿಪಿ) ಸರೋಜಾ ಕೂಡಲಗಿಮಠ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net