ನೀರನ ಕರ ಬಾಕಿ ವಸೂಲಿಗೆ ಅಭಿಯಾನ; 12 ಕೋಟಿ ರೂ. ಸಂಗ್ರಹಕ್ಕೆ ಮನೆ ಮನೆಗೆ ಹೊರಟ ಅಧಿಕಾರಿಗಳು; ಪಾವತಿಸದ ಮನೆಗಳ ನಳ ಸಂಪರ್ಕ ಕಟ್

Haveri, CMC, Water Bill, Collection, Campagin,
Haveri, CMC, Water Bill, Collection, Campagin,
Published on
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಹತ್ತಾರು ವರ್ಷಗಳಿಂದ 12 ಕೋಟಿ ರೂ.ಗೂ ಅಧಿಕ ಕುಡಿಯುವ ನೀರಿನ ಕರ ಬಾಕಿ ಉಳಿದಿದ್ದು, ಈ ಹಣ ವಸೂಲಿಗೆ ಸ್ವತಃ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ, ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು ನೇತೃತ್ವದ ತಂಡ ಬೀದಿಗೆ ಇಳಿದಿದೆ. ಬಾಕಿ ನೀರಿನ ಕರ ಪಾವತಿಸದ ಮನೆಗಳ ನಳ ಸಂಪರ್ಕ ಬಂದ್ ಮಾಡುವ ಮೂಲಕ ಬಿಸಿ ಮುಟ್ಟಿಸಿದರು.
ಮಂಗಳವಾರ ಅಶ್ವಿನಿ ನಗರದಲ್ಲಿ ಮನೆ ಮನೆಗೆ ತೆರಳಿ ನೀರಿನ ಕರ ವಸೂಲಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿ ತಂಡ ಮುಂದಾಯಿತು. ಈ ವೇಳೆ ಸ್ಥಳೀಯರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಯಿತು. ಸಮರ್ಪಕವಾಗಿ ನೀರು ಪೂರೈಸಿ, ನಂತರ ನೀರಿನ ಕರ ಕೇಳಿ ಎಂದು ಸ್ಥಳೀಯರು ಆವಾಜ್ ಹಾಕಿದರು. ಬಾಕಿ ಪಾವತಿಸಲು ಒಪ್ಪದ 10ಕ್ಕೂ ಅಧಿಕ ಮನೆಗಳ ನೀರಿನ ಸಂಪರ್ಕ ಕಟ್ ಮಾಡಿದರು.
ಹಲವು ನಿವಾಸಿಗಳು ಸ್ಥಳದಲ್ಲೇ ಬಾಕಿ ಪಾವತಿಸಿದರು. ಕೆಲವರು ಸಮಯಾವಕಾಶ ಕೇಳಿದರು. ವಾರದ ಒಳಗೆ ಪಾವತಿಸಲು ಸಮಯ ನೀಡಿದರು. ಕೆಲವರು ಎರಡು ಕಂತುಗಳಲ್ಲಿ ಹಣ ಪಾವತಿಸಲು ಅನುಮತಿ ಪಡೆದರು.
ಈ ವೇಳೆ ‘ವಿಜಯವಾಣಿ’ ಜತೆಗೆ ಮಾತನಾಡಿದ ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು, ಹಾವೇರಿ ನಗರದಲ್ಲಿ ಈ ಮೊದಲು 10, 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, 4, 5 ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಕೆಲವು ಬಡಾವಣೆಗಳಲ್ಲಿ ಮಾತ್ರ ವಾರಕ್ಕೊಮ್ಮೆ ಪೂರೈಸಲಾಗುತ್ತಿದೆ. ಅಂದಾಜು 12 ಕೋಟಿ ರೂ. ನೀರಿನ ಕರ ಬಾಕಿ ಇದೆ. ಇದರಿಂದಾಗಿ ನೀರುಗಂಟಿಗಳಿಗೆ ಮೂರು ತಿಂಗಳಿಂದ ವೇತನ ಪಾವತಿಸಲು ಆಗಿಲ್ಲ. ನೀರಿನ ಬಾಕಿ ತೆರಿಗೆ ಪಾವತಿಸಿದರೆ ನೀರಿನ ಪೂರೈಕೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿ ಆಗುತ್ತದೆ. ಜನರೂ ಈ ಅಭಿಯಾನಕ್ಕೆ ಸಹಕಾರ ನಿಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಎಇಇ ಮಹೇಶ ಕಲಾಲ, ಜೆಇಇಗಳಾದ ಮಹಮ್ಮದ್ ಸಮೀರ್, ರೇಣುಕಾ ಆರ್., ಕಂದಾಯ ಅಧಿಕಾರಿ ಗಿರಿಜಾ ಹಾದಿಮನಿ, ಕಂದಾಯ ಇನ್ಸ್‌ಪೆಕ್ಟರ್ ನಿರ್ಮಲಾ ಅಂಗಡಿ, ವಾಲ್‌ಮನ್‌ಗಳು, ಪೌರ ಕಾರ್ಮಿಕರು, ಬಿಲ್ ಕಲೆಕ್ಟರ್‌ಗಳು ಇದ್ದರು.
4 ಸಾವಿರ ಅಕ್ರಮ ಸಂಪರ್ಕ
ನಗರಸಭೆ ವ್ಯಾಪ್ತಿಯ 31 ವಾರ್ಡುಗಳಲ್ಲಿ 16 ಸಾವಿರ ನಳಗಳ ಸಂಪರ್ಕ ಇರಬೇಕಿತ್ತು. ಆದರೆ, ಅಧಿಕೃತವಾಗಿ 9,000 ನಳಗಳು ಮಾತ್ರ ಇವೆ. 4 ಸಾವಿರ ಅಕ್ರಮ ನಲ್ಲಿಗಳು ಇವೆ. ಅಕ್ರಮ ನಳ ಹೊಂದಿದವರು 10,660 ರೂ. ಪಾವತಿಸಿದರೆ ಅಕ್ರಮ ಸಕ್ರಮ ಮಾಡಲಾಗುವುದು. 2005ರಿಂದ ಈವರೆಗೆ ನೀರಿನ ಕರ ಪಾವತಿ ಮಾಡದ ಹಲವು ಮನೆಗಳಿವೆ. ಬಡ್ಡಿಸಮೇತ ವಸೂಲಿ ಮಾಡಲಾಗುತ್ತಿದೆ. ತಿಂಗಳಿಗೆ 120 ರೂ.ರಂತೆ ವರ್ಷಕ್ಕೆ 1400 ರೂ. ನೀರಿನ ಕರ ಪಾವತಿ ಮಾಡಬೇಕಿದೆ ಎನ್ನುತ್ತಾರೆ ಎಚ್.ಕಾಂತರಾಜು.
ನೀರು ಕುಡಿಯಲು ಯೋಗ್ಯವಾಗಿದೆ
ಪ್ರಸ್ತುತ ಹಾವೇರಿ ಶಹರದಲ್ಲಿ ತುಂಗಭದ್ರಾ ನದಿ, ಹೆಗ್ಗೇರಿ ಕೆರೆ ಹಾಗೂ 540 ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಎಲ್ಲಿಯೂ ಇಲ್ಲದಷ್ಟು ಬೋರ್‌ವೆಲ್‌ಗಳು ಇಲ್ಲಿವೆ. ವೈಜ್ಞಾನಿಕವಾಗಿ ಫಿಲ್ಟರ್ ಮಾಡಿ ನೀರು ಪೂರಸಲಾಗುತ್ತಿದ್ದು, ಕುಡಿಯಲು ಯೋಗ್ಯವಾಗಿದೆ. ಪ್ರತಿ ವಾರವೂ ನೀರಿನ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ಕಾಂತರಾಜು ಹೇಳಿದರು.
"

ಕೋಟ್ : ಹಾವೇರಿ ಶಹರದಲ್ಲಿ ಅತಿ ಹೆಚ್ಚು 12 ಕೋಟಿ ರೂ. ನೀರಿನ ಕರ ಬಾಕಿ ಇದೆ. ಹಾಗಾಗಿ, ಬಾಕಿ ವಸೂಲಿ ಅಭಿಯಾನ ಆರಂಭಿಸಲಾಗಿದೆ. ಮೊದಲು ಎಚ್ಚರಿಕೆ ನೀಡಲಾಗುವುದು. ಬಾಕಿ ಪಾವತಿ ಮಾಡದಿದ್ದರೆ ಸಾಮೂಹಿಕವಾಗಿ ನೀರು ಪೂರೈಕೆ ನಿಲ್ಲಿಸಲು ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಕರ ಪಾವತಿಸಿದರೆ ನೀರಿನ ಪೂರೈಕೆಯ ನಿರ್ವಹಣೆ, ದುರಸ್ತಿ, ವೇತನ ನೀಡಲು ಸಾಧ್ಯವಾಗುತ್ತದೆ.

— ಸಿ.ಚಂದ್ರಪ್ಪ, ಜಿಲ್ಲಾ ಯೋಜನಾಧಿಕಾರಿ, ನಗರಾಭಿವೃದ್ಧಿ ಕೋಶ

"

ನೀರಿನ ಕರ ವಸೂಲಿಗೆ ಅಭಿಯಾನ ಆರಂಭಿಸಲಾಗಿದೆ. ಈ ಮೊದಲೇ ಸಾರ್ವಜನಿಕರಿಗೆ ಬಾಕಿ ಹಣ ಪಾವತಿಸಲು ಸೂಚನೆ ನೀಡಲಾಗಿತ್ತು. ಮನೆ ಮನೆಗೆ ತೆರಳಿ, ಕಸದ ವಾಹನಗಳ ಮೂಲಕ, ಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗಿತ್ತು. ಆದರೂ, ಶೇ.90ರಷ್ಟು ಜನರು ನೀರಿನ ಕರ ಪಾವತಿ ಮಾಡಿರಲಿಲ್ಲ. ಹಾಗಾಗಿ, ಅಭಿಯಾನ ಆರಂಭಿಸಲಾಗಿದೆ. ನೀರಿನ ತೆರಿಗೆ ಪಾವತಿ ಮಾಡಿದ್ದರೆ ನೀರಿನ ಸಂಪರ್ಕ ಬಂದ್ ಮಾಡಲಾಗುವುದು. ಜನ ಸಹಕಾರ ಕೊಟ್ಟರೆ, ಆರು ತಿಂಗಳಲ್ಲಿ ನೀರಿನ ಎಲ್ಲ ಸಮಸ್ಯೆ ಬಗೆಹರಿಸಲಾಗುವುದು.

— ಎಚ್.ಕಾಂತರಾಜು, ಪೌರಾಯುಕ್ತ, ನಗರಸಭೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net