ತೆರಿಗೆ ಸಂಗ್ರಹ ಹಿನ್ನಡೆಗೆ ಶಾಸಕರು ಗರಂ; ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ರುದ್ರಪ್ಪ ಲಮಾಣಿ ಬೇಸರ; ಕೆಲಸ ಮಾಡದವರಿಗೆ ಗೇಟ್‌ಪಾಸ್ ಎಚ್ಚರಿಕೆ

haveri-cmc-mla-visit, Meeting,
haveri-cmc-mla-visit, Meeting,
Published on
ಹಾವೇರಿ: ಇಲ್ಲಿನ ನಗರಸಭೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತ ಪೊಲೀಸರ ದಾಳಿ ಬೆನ್ನಲ್ಲೇ ಮಂಗಳವಾರ ನಗರಸಭೆ ಕಚೇರಿಯಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಅವರು, ಏಪ್ರಿಲ್ ತಿಂಗಳೊಳಗೆ ಸಂಗ್ರಹವಾಗಬೇಕಿದ್ದ ತೆರಿಗೆ ಹಣ ಗಣನೀಯವಾಗಿ ಕಡಿಮೆಯಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಪರಿಶೀಲಿಸಿ, ವಿಲೇವಾರಿ ಮಾಡಬೇಕು. ನಗರಸಭೆಯ ಕಾರ್ಯವೈಖರಯನ್ನು ಸುಧಾರಿಸಿಕೊಳ್ಳಬೇಕು. ಸಾರ್ವಜನಿಕ ವಿರೋಧಿ ನೀತಿಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಯಾರು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಕೆಲಸ ಮಾಡುತ್ತಾರೋ ಅವರು ಮಾತ್ರ ಕಚೇರಿಯಲ್ಲಿ ಇರಿ. ಉಳಿದವರು ತಕ್ಷಣವೇ ಇಲ್ಲಿಂದ ಹೊರಗೆ ಹೋಗಿ ಎಂದು ಕಟುವಾದ ಶಬ್ದಗಳಲ್ಲಿ ಎಚ್ಚರಿಸಿದರು.
ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪೌರಾಯುಕ್ತ ಎಚ್.ಕಾಂತರಾಜು, ನಗರಸಭೆ ಮಾಜಿ ಸದಸ್ಯರಾದ ಅತಾವುಲ್ಲಾ ಖಾಜಿ, ಸಿ.ಎಸ್.ಲಕ್ಷ್ಮೇಶ್ವರಮಠ, ಶಂಕರ ಮೆಹರವಾಡೆ, ಮಾಲಿಂಗಯ್ಯ ಹಿರೇಮಠ, ಉಮರ್ ಇನಾಮದಾರ, ಇತರರು ಇದ್ದರು.
ಜನರ ಸಹಕಾರ ಪಡೆಯಿರಿ
ಹಾವೇರಿ ನಗರದಲ್ಲಿ ಜನರ ಸಹಕಾರದೊಂದಿಗೆ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ನಗರವನ್ನು ಮಾದರಿಯನ್ನಾಗಿ ಮಾಡಲು ನಾನು ಸಿದ್ಧನಿದ್ದೇನೆ. ಅದಕ್ಕೆ ಪೂರಕವಾಗಿ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಶಾಸಕರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net