ಕೆರೆಯಲ್ಲಿ ಮುಳುಗಿ ಬಾಲಕ ಮುಸ್ತಫಾ ಸಾವು; ನಗರಸಭೆ ವಿರುದ್ಧ ಪಾಲಕರ ಏಕಾಏಕಿ ಪ್ರತಿಭಟನೆ

lake-boy-death-
lake-boy-death-
Published on
ಹಾವೇರಿ: ನಗರದ ಗುರು ಭವನದ ಹಿಂಭಾಗದ ಅಕ್ಕಮಹಾದೇವಿ ಹೊಂಡದ ನೀರಿನಲ್ಲಿ ಶುಕ್ರವಾರ ಬಾಲಕನೊಬ್ಬ ಮೃತಪಟ್ಟಿದ್ದು, ಈ ಅವಘಡಕ್ಕೆ ನಗರಸಭೆ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿ ಬಾಲಕನ ಕುಟುಂಬಸ್ಥರು, ಸ್ಥಳೀಯರು ಜಿಲ್ಲಾಸ್ಪತ್ರೆ ಎದುರು ಏಕಾಏಕಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಶಿವಾಜಿ ನಗರ ನಿವಾಸಿ ಮುಸ್ತಫಾ ರಫೀಕ್‌ಸಾಬ ಹಂಚಿಮನಿ (16) ಮೃತ ಬಾಲಕ.
ಸ್ನೇಹಿತರ ಜತೆಗೆ ಕೆರೆಯಲ್ಲಿ ಈಜಲು ಅಕ್ಕಮಹಾದೇವಿ ಹೊಂಡಕ್ಕೆ ಹೋಗಿದ್ದಾಗ ಕೆರೆಯ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಶಹರ ಠಾಣೆ ಪೊಲೀಸರು ತಿಳಿಸಿದರು. ಬಾಲಕ ಈಜು ಬಾರದೇ ನೀರಿನಲ್ಲಿ ಮುಳುಗಿದ್ದ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಸ್ಥಳೀಯರು ಬಾಲಕನನ್ನು ಪತ್ತೆ ಹಚ್ಚಿ ಹೊರ ತೆಗೆದರು.
ಜಿಲ್ಲಾಸ್ಪತ್ರೆಗೆ ಬಾಲಕನನ್ನು ಕರೆದೊಯ್ದ ಬಳಿಕ ಆತ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು. ಸ್ಥಳದಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರಸಭೆ ವಿರುದ್ಧ ಪಾಲಕರ ಪ್ರತಿಭಟನೆ
ಬಾಲಕನ ಕುಟುಂಬಸ್ಥರು ಹಾಗೂ ಸ್ಥಳೀಯರು ನಗರದ ಕಾಗಿನೆಲೆ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ ಎದುರು ವಾಹನಗಳ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಕೆರೆ ಬಳಿ ಮೆಟ್ಟಿಲು ಮೇಲೆ ನಿಂತಿದ್ದ ಮುಸ್ತಫಾ ಆಯತಪ್ಪಿ ಹೊಂಡದೊಳಗೆ ನೀರಿನಲ್ಲಿ ಬಿದ್ದಿದ್ದಾನೆ. ಹೊಂಡದ ಸುತ್ತಲೂ ನಗರಸಭೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೊಂಡವನ್ನೂ ಅಭಿವೃದ್ಧಿ ಮಾಡಿಲ್ಲ. ನಗರಸಭೆ ನಿರ್ಲಕ್ಷೃದಿಂದ ಬಾಲಕ ಮೃತಪಟ್ಟಿದ್ದಾನೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಸ್ಥಳಕ್ಕಾಗಮಿಸಿದರು. ಹೊಂಡದ ಅಭಿವೃದ್ಧಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಜತೆಗೆ ಚರ್ಚಿಸಿ 5 ಲಕ್ಷ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net