ನಿಷೇಧಿತ ಪ್ಲಾಸ್ಟಿಕ್ ಜಪ್ತಿ, ಮಾಲೀಕರಿಗೆ ದಂಡ; ಹಾವೇರಿ ನಗರಸಭೆ ಪೌರಾಯುಕ್ತರ ನೇತೃತ್ವದ ತಂಡದಿಂದ ದಾಳಿ

haveri-cmc-commissioner, Plastic, Raid,
haveri-cmc-commissioner, Plastic, Raid,
Published on
ಹಾವೇರಿ: ನಗರದ ಎಲ್‌ಬಿಎಸ್ ಮಾರುಕಟ್ಟೆ, ಎಂ.ಜಿ ರಸ್ತೆ ಸೇರಿದಂತೆ ವಿವಿಧಡೆ ಅಂಗಡಿಗಳ ಮೇಲೆ ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು ನೇತೃತ್ವದ ತಂಡ ಗುರುವಾರ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿ, ಮಾಲೀಕರಿಗೆ ದಂಡ ವಿಧಿಸಿದೆ.
ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ನಗರದ ಕಿರಾಣಿ ಸ್ಟೋರ್, ಸ್ಟೇಶನರಿ ಅಂಗಡಿ, ಹೊಲ್‌ಸೇಲ್ ಮಳಿಗೆ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಸಾಮಗ್ರಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿ, ಸಿಬ್ಬಂದಿ ತಂಡ ದಾಳಿ ನಡೆಸಿತು. ಪ್ಲಾಸ್ಟಿಕ್ ಕೈಚೀಲ, ಪ್ಲಾಸ್ಟಿಕ್ ಕಪ್ಪು, ಬೊಯಲ್, ಪ್ಲಾಸ್ಟಿಕ್ ಬಾಟಲ್, ವಿವಿಧ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಕ್ಕೆ ಪಡೆದರು.
ನಗರಸಭೆ ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಅಂಗಡಿಗಳ ವ್ಯಾಪಾರಸ್ಥರು ನೋಟಿಸ್, ಮಾಹಿತಿ ನೀಡದೇ ಏಕಾಏಕಿ ದಾಳಿ ನಡೆಸಿ, ದಂದ ವಿಧಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಾಯುಕ್ತ ಎಚ್.ಕಾಂತರಾಜು, ಸುಪ್ರೀಂಕೋರ್ಟ್ ಪ್ಲಾಸ್ಟಿಕ್ ನಿಷೇಸಿದ್ದರೂ ಸಹಿತ ವ್ಯಾಪಾರಸ್ಥರು, ಅಂಗಡಿ ಮಾಲೀಕರು ಹೋಲ್‌ಸೆಲ್ ದರದಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಇತರೆ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಣ್ಣಪುಟ್ಟ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪರಿಸರ ಮಲಿನವಾಗುವುದರ ಜತೆಗೆ ಪ್ಲಾಸ್ಟಿಕ್ ಸಂಸ್ಕರಣೆ ಮಾಡುವುದೇ ಸಮಸ್ಯೆಯಾಗಿದೆ. ಹೀಗಾಗಿ, ಗುರುವಾರದಿಂದ ದಾಳಿ ಆರಂಭಿಸಲಾಗಿದೆ. ನಾಲ್ಕು ಅಂಗಡಿಯಿಂದ 1.50 ಲಕ್ಷ ರೂ. ಸಾಮಗ್ರಿ ವಶಪಡಿಸಿಕೊಂಡಿದೆ. 14 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಹಾವೇರಿಯಲ್ಲಿ ಸುಮಾರು 2,500 ಅಂಗಡಿಗಳಿದ್ದು, ನಿರಂತರವಾಗಿ ದಾಳಿ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಆರೋಗ್ಯ ನಿರೀಕ್ಷಕರಾದ ರಮೇಶ ಮುಂಜೋಜಿ, ರೂಪಾ ನಾಯ್ಕರ, ಗಿರೀಶ ಹರವಿ, ತಬಸೂಮ್‌ಬಾನು ಎಸ್.ಕೆ., ಪೌರ ಕಾರ್ಮಿಕರಾದ ಅಣ್ಣಪ್ಪ ತಗಡಿನಮನಿ, ದುರ್ಗೇಶ ತಿಮ್ಮಾಪುರ, ನೀಲಪ್ಪ ತಿಪ್ಪಣ್ಣವರ, ಚಂದ್ರಪ್ಪ ತಿಪ್ಪಣ್ಣನವರ, ಇತರರು ಪಾಲ್ಗೊಂಡಿದ್ದರು.
ಮೊದಲು ಕಂಪನಿ ಬಂದ್ ಮಾಡಿಸಿ
ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಿ ಜೀವನ ನಡೆಸುವವರಿಗೆ 5 ಸಾವಿರ ರೂ. ದಂಡ ಹಾಕುವುದು ಸರಿಯಲ್ಲ ಎಂದು ವ್ಯಾಪಾರಸ್ಥರು ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿದರು. ಪ್ಲಾಸ್ಟಿಕ್ ಬ್ಯಾನ್ ಮಾಡುವುದಾದರೆ ಪ್ಲಾಸ್ಟಿಕ್ ಉತ್ಪಾದಿಸುವ ಕಂಪನಿಗಳನ್ನು ಮೊದಲು ಬಂದ್ ಮಾಡಿಸಿ. ಸರ್ಕಾರಕ್ಕೆ ನೀವೇ ಪತ್ರ ಬರೆಯಿರಿ ಎಂದು ವ್ಯಾಪಾರಿಗಳು, ನಗರಸಭೆ ಅಧಿಕಾರಿಗಳಿಗೆ ಆಗ್ರಹಿಸಿದರು.
"

ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡದಂತೆ ಸುಪ್ರೀಂಕೋರ್ಟ್ ನಿರ್ದೇಶನವಿದೆ. ಈ ಕುರಿತು ನಗರಸಭೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ನಗರದ ಅಂಗಡಿಗಳ ಮಾಲೀಕರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಚೀಲ ಬದಲಾಗಿ, ಪರ್ಯಾಯವಾಗಿ ಬಟ್ಟೆ, ಪೇಪರ್ ಚೀಲಗಳನ್ನು ಬಳಸಬೇಕು. ಸಾರ್ವಜನಿಕರೂ ಕೂಡ ಂಗಡಿಗಳು ಹಾಗೂ ಮಾರುಕಟ್ಟೆಗೆ ಬರುವಾಗ ಮನೆಯಿಂದಲೇ ಕೈಚೀಲಗಳನ್ನು ತಂದು ಪರಿಸರ ಕಾಪಾಡಲು ಸಹಕರಿಸಬೇಕು.

— ಎಚ್.ಕಾಂತರಾಜು, ನಗರಸಭೆ ಪೌರಾಯುಕ್ತ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net