ಆಶ್ರಯ ಮನೆ ಹಸ್ತಾಂತರಿಸಲು ಅಲೆಮಾರಿಗಳ ಆಗ್ರಹ; ಕುಟುಂಬಸಮೇತರಾಗಿ ಹಾವೇರಿ ನಗರಸಭೆ ಎದುರು ಪ್ರತಿಭಟನೆ

alemari, protest,
alemari, protest,
Published on
ಹಾವೇರಿ: ಇಲ್ಲಿನ ಶಾಂತಿನಗರದಲ್ಲಿ ಮೂರು ದಶಕಗಳಿಂದ ಗುಡಿಸಲಲ್ಲೇ ವಾಸವಾಗಿರುವ 33 ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಅಲೆಮಾರಿ ಸಮುದಾಯದವರು ಕುಟುಂಬಸಮೇತರಾಗಿ ಇಲ್ಲಿನ ನಗರಸಭೆ ಕಾರ್ಯಾಲಯದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಲೆಮಾರಿಗಳು, ಹಗಲು ವೇಷಧಾರಿಗಳು ಭಜನೆ ಮಾಡಿ, ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಸಮಿತಿಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ, ನಾಗೇಂದ್ರನಮಟ್ಟಿ ಶಾಂತಿನಗರದಲ್ಲಿ ಹಲವು ವರ್ಷಗಳಿಂದ ಗುಡಿಸಲು ಹಾಕಿಕೊಂಡು 33 ಅಲೆಮಾರಿ ಕುಟುಂಬಗಳು ವಾಸಿಸುತ್ತಿವೆ. ಮಳೆಗಾಲದಲ್ಲಿ ಜೀವನ ಸಾಗಿಸುವುದೇ ದೊಡ್ಡ ಸಾಹಸವಾಗಿದೆ. ಕಳೆದ ವರ್ಷ ಮಳೆಗೆ ಒಬ್ಬ ಮಹಿಳೆ ಮೃತಪಟ್ಟರು. ಐದು ವರ್ಷದ ಮಗು ಹಾವು ಕಚ್ಚಿ ಮೃತಪಟ್ಟಿತು. ಮಳೆ, ಗಾಳಿಗೆ ಗುಡಿಸಲಿನ ತಾಡಪತ್ರಿಗಳು ಹಾರಿ ಹೋಗುತ್ತವೆ. ಅಡುಗೆ ಮಾಡಲು ಆಗದಷ್ಟು ನೀರು ಸೋರುತ್ತದೆ. ಕಿರಾಣಿ ಸಾಮಗ್ರಿಗಳು ಹಸಿಯಾಗಿ, ಹಸಿದ ಹೊಟ್ಟೆಯಲ್ಲೇ ಮಕ್ಕಳು ಮಲಗುವ ದುಸ್ಥಿತಿ ಇದೆ. ಅಲೆಮಾರಿಗಳಿಗೆ ಈವರೆಗೆ ಸ್ವಾತಂತ್ರೃವೇ ಸಿಕ್ಕಿಲ್ಲ. ಅಲೆಮಾರಿ ನಿಗಮದಿಂದ ಯಾವುದೇ ಸೌಲಭ್ಯಗಳೂ ಸಿಕ್ಕಿಲ್ಲ.
ಶಾಂತಿನಗರದಲ್ಲಿ ರಾಜೀವ ಗಾಂಧಿ ವಸತಿ ನಿಗಮದ ಅಡಿಯಲ್ಲಿ ನಿರ್ಮಿಸುತ್ತಿರುವ ಆಶ್ರಯ ಮನೆಗಳನ್ನೇ ಹಸ್ತಾಂತರಿಸುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಹಲವು ವರ್ಷಗಳಿಂದ ಇಲ್ಲಿ ಕಾಮಗಾರಿ ನಿಧಾನಗತಿಯಲ್ಲಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ, ಮನೆಗಳನ್ನು ಹಸ್ತಾಂತರಿಸಬೇಕು. ಇಲ್ಲದಿದ್ದರೆ ಹಾವೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮಿತಿ ರಾಜ್ಯ ಸಂಚಾಲಕ ಸುಭಾಷ ಚವ್ಹಾಣ, ಸಾವಿತ್ರಮ್ಮ ರತ್ನಾಕರ, ಉಮೇಶ ಮಹಾಂತ, ಪೀರಪ್ಪ ಬಾದಗಿ, ಶಂಕರಪ್ಪ ವಿಭೂತಿ, ರಾಜೇಶ ಮಾಸ್ತರ, ಶಿವು ಬಾದಗಿ, ದುರ್ಗಮ್ಮ ಬಾದಗಿ, ಈರಮ್ಮ ಕೋನರು, ಇತರರಿದ್ದರು.
ಸಮಸ್ಯೆ ಬಗೆಹರಿಸುವ ಭರವಸೆ
ಹಾವೇರಿ ಆಶ್ರಯ ಸಮಿತಿ ಅಧ್ಯಕ್ಷ ಜಗದೀಶ ಬೆಟಗೇರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಲೆಮಾರಿ ಸಮುದಾಯದವರ ಮನವಿ ಪತ್ರ ಸ್ವೀಕರಿಸಿದರು. ಕಟ್ಟಡ ನಿರ್ಮಾಣಕ್ಕೆ ಕೆಲ ಕಾನೂನು ತೊಡಕು ಅಡ್ಡಿಯಾಗಿದ್ದು, 15 ದಿನದಲ್ಲಿ ಈ ಸಮಸ್ಯೆ ಬಗೆಹರಿಸಿ, ಕಾಮಗಾರಿ ಆರಂಭಿಸಿ ಆದಷ್ಟು ಶೀಘ್ರವೇ ಕಟ್ಟಡ ನಿರ್ಮಿಸಿ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net