ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಈವರೆಗೆ ಗುತ್ತಿಗೆದಾರರ ಸಮಸ್ಯೆ ಆಲಿಸಲು ಒಂದು ಸಭೆಯನ್ನೂ ಮಾಡಿಲ್ಲ. ಗುತ್ತಿಗೆದಾರರ 37 ಸಾವಿರ ಕೋಟಿ ಬಾಕಿ ಹಣ ಬಿಡುಗಡೆ ಮಾಡಿಲ್ಲ. ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಮಾ.5ರಂದು ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಸರ್ಕಾರದಿಂದ 37 ಸಾವಿರ ಕೋಟಿ ರೂ., ಬಾಕಿ ಬರಬೇಕಿದೆ. ಬಾಕಿ ಹಣ ಹಳೆಯ ಸರ್ಕಾರದ್ದು ಎಂದು ಈಗಿನ ಸರ್ಕಾರ ಹೇಳುತ್ತಿದೆ. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಕೆಲಸಕ್ಕೆ ತಕ್ಕ ಕೂಲಿ ಕೊಡಿ ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಜಿಎಸ್‌ಟಿ, ರಾಯಲ್ಟಿ, ಇತರ ಸಮಸ್ಯೆಗಳಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಪರಿಹಾರ ಬೇಕಿದೆ ಎಂದರು.
ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಲವು ಸಭೆಗಳನ್ನು ಮಾಡಿ, ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿದ್ದರು. ಆದರೆ, ಸಿದ್ದರಾಮಯ್ಯನವರು ಒಂದೇ ಒಂದು ಸಭೆಯನ್ನೂ ಮಾಡಿಲ್ಲ. ಸಿಎಂ ಹಲವು ಸಲ ಸಭೆಗೆ ದಿನಾಂಕ ನಿಗದಿಪಡಿಸಿ ಮುಂದೂಡಿದ್ದಾರೆ. ನೇರವಾಗಿ ಭೇಟಿಯಾಗಿದ್ದೇವೆ. ಆದರೂ ಸಭೆ ಮಾಡುತ್ತಿಲ್ಲ. ಮಾ.5ರಂದು ಸಾಂಕೇತಿಕವಾಗಿ ಪ್ರತಿಭಟಿಸಲಾಗುವುದು. ಬೇಡಿಕೆ ಈಡೇರದಿದ್ದರೆ, ಏಪ್ರಿಲ್ ನಂತರ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಣ ಬಿಡುಗಡೆ ವಿಚಾರದಲ್ಲಿ ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಕಮಿಷನ್ ಇರುವುದು ನಿಜ. ಮೂರು ವರ್ಷದ ಹಣಕ್ಕೂ ಪರ್ಸಟೇಜ್ ಕೊಡಬೇಕು ಎಂಬುದು ಅನ್ಯಾಯ. ಈ ಬಗ್ಗೆ ದೂರು ಕೊಡುವುದಿಲ್ಲ. ಸಿಎಂ ಮತ್ತು ಡಿಸಿಎಂ ಇಬ್ಬರೂ ಸಹ ನಮ್ಮ ದೊರೆಗಳಿದ್ದಂತೆ. ನಾವು ಏನಿದ್ದರೂ ಮನೆಯ ಯಜಮಾನ ಬಳಿ ಕೇಳಬೇಕು. ಹಾಗಾಗಿ, ನಮ್ಮ ಬಾಕಿ ಕೇಳುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹಾವೇರಿ, ಮಲ್ಲಿಕಾರ್ಜುನ ಹಾವೇರಿ, ಜಿ.ಎಂ.ಜಗದೀಶ, ಜೆ.ಸಿ.ಮಧು, ಸಂತೋಷ ಹಿರೇಮಠ, ಲಿಂಗರಾಜ ಚಪ್ಪರದಹಳ್ಳಿ, ಅಶೋಕ ಬಣಕಾರ, ಇತರರಿದ್ದರು.
ಬಾಕ್ಸ್
ಪ್ಯಾಕೇಜ್ ಹಾವಳಿ
ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ನಾವು ಅಧಿಕಾರಕ್ಕೆ ಬಂದರೆ ಪ್ಯಾಕೇಜ್ ಮಾಡಲ್ಲ ಎಂದಿದ್ದರು. ಆದರೆ ಹಿಂದಿನ ಸರ್ಕಾರಕ್ಕಿಂತಲೂ ಈಗ ಹೆಚ್ಚಿನ ಪ್ಯಾಕೇಜ್ ನಡೆಯುತ್ತಿದೆ. ಹಣ ಇರುವ ಕಾಮಗಾರಿಗಳ ಪ್ಯಾಕೇಜ್ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎಂದು ಮಂಜುನಾಥ ದೂರಿದರು.