ದಲ್ಲಾಳಿಯಿಂದ ರೈತನಿಗೆ 55 ಲಕ್ಷ ವಂಚನೆ ಆರೋಪ; ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟಿದ್ದ ಬ್ಯಾಡಗಿ ಮೆಣಸಿನಕಾಯಿ ನಾಪತ್ತೆ; ನ್ಯಾಯಕ್ಕಾಗಿ ರೈತ ಕುಟುಂಬ ಅಲೆದಾಟ

Haveri, Byadagi, Farmer, Chilly, market, APMC, Fruad,
Haveri, Byadagi, Farmer, Chilly, market, APMC, Fruad,
Published on
ಹಾವೇರಿ: ವಿಶ್ವದಲ್ಲೇ ಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳು, ಏಜೆಂಟರ ಹಾವಳಿ ವಿಪರೀತವಾಗಿದ್ದು, ದಲ್ಲಾಳಿಯೊಬ್ಬ ಬಳ್ಳಾರಿ ಮೂಲದ ರೈತರಿಗೆ ಸೇರಿದ 363 ಚೀಲ ಮೆಣಸಿನಕಾಯಿಯನ್ನು ಅವರ ಅನುಮತಿ ಇಲ್ಲದೇ, ಕೋಲ್ಡ್ ಸ್ಟೋರೇಜ್‌ನಿಂದ ಪಡೆದು, ಮಾರಾಟ ಮಾಡಿ ಅಂದಾಜು 55 ಲಕ್ಷ ರೂ. ವಂಚನೆ ಮಾಡಿರುವ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಡಗಿ ಕಾಕೋಳ ರಸ್ತೆ ನಿವಾಸಿ ನಾಗಪ್ಪ ಸಿದ್ದರಾಮಯ್ಯ ಹಡಗಲಿ ರೈತರಿಗೆ ವಂಚನೆ ಮಾಡಿರುವ ಆರೋಪಿ.
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕು ಬಂಡ್ರಾಳ ಗ್ರಾಮದ ನಿವಾಸಿ, ರೈತ ಸಿ.ಮಹದೇವಪ್ಪ ಎಂಬುವರು 2023ರಲ್ಲಿ 363 ಚೀಲ ಒಣ ಮೆಣಸಿನಕಾಯಿ ಮಾರಾಟಕ್ಕೆ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದರು. ಆಗ ಸೂಕ್ತ ಬೆಲೆ ಸಿಗದ ಕಾರಣ, ಬ್ಯಾಡಗಿಯ ತಿಪ್ಪೇಸ್ವಾಮಿ ಕಮಿಷನ್ ಏಜೆಂಟ್ಸ್ ಅಂಗಡಿಯ ಮಾಲೀಕ ನಾಗಪ್ಪ ಹಡಗಲಿ ಸದ್ಯಕ್ಕೆ ರೇಟ್ ಕಡಿಮೆ ಇದೆ. ಒಳ್ಳೆಯ ರೇಟ್ ಬಂದ ನಂತರ ಮಾರಾಟ ಮಾಡಿ ಎಂದು ಹೇಳಿದ್ದರು. ತಮಗೆ ಪರಿಚಯವಿದ್ದ ಎಂಟಿಸಿ ಕೋಲ್ಡ್ ಸ್ಟೋರೇಜ್‌ನಲ್ಲಿ 363 ಚೀಲ (ಒಂದು ಚೀಲದಲ್ಲಿ 35 ಕೆಜಿ ಮೆಣಸಿನಕಾಯಿ) ಮೆಣಸಿನಕಾಯಿ ಬಾಡಿಗೆ ಕೊಟ್ಟು ಇಟ್ಟಿದ್ದರು. ಮೂಲ ರಸೀದಿಯಯಲ್ಲಿ ಮಹದೇವಪ್ಪರ ಹೆಸರು, ವಿಳಾಸ ಬರೆಸಿದ್ದರು. ಕೇರ್ ಆಫ್ ಅಡ್ರೆಸ್ ಕಾಲಂನಲ್ಲಿ ಆರೋಪಿ ತಿಪ್ಪೇಸ್ವಾಮಿ ಕಮೀಷನ್ ಏಜೆಂನ್ಸಿ ಹೆಸರು ಬರೆಸಿದ್ದರು. ಮೂಲ ರಸೀದಿ ತಾನೇ ಇಟ್ಟುಕೊಂಡು, ಝರಾಕ್ಸ್ ಪ್ರತಿಯನ್ನು ತಾನೇ ಇಟ್ಟುಕೊಂಡಿದ್ದರು.
ಜನವರಿ 16, 2026ರಂದು ಕೋಲ್ಡ್ ಸ್ಟೋರೇಜ್ ಮಾಲೀಕರಿಗೆ ಮೂಲ ರಸೀದಿ ಕೊಟ್ಟು ತಾನೇ ಮಾರುಕಟ್ಟೆಗೆ ತೆರಳಿ ಮಾರಾಟ ಮಾಡಿ, ನಮಗೆ ಅಂದಾಜು 54ರಿಂದ 55 ಲಕ್ಷ ರೂ. ವಂಚಿಸಿದ್ದಾರೆ ಎಂದು ಮಹದೇವಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.
30 ಲಕ್ಷ ರೂ. ಸಾಲ
ಬಳ್ಳಾರಿಯಲ್ಲಿ ಸುಮಾರು 30 ಲಕ್ಷ ರೂ. ಸಾಲ ಮಾಡಿ 20 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೆವು. 2023ರಲ್ಲಿ ಮಾರಾಟ ಮಾಡಲು ತಂದಿದ್ದೆವು. ಸೂಕ್ತ ಬೆಲೆ ಸಿಗದ ಕಾರಣ ಕೋಲ್ಡ್ ಸ್ಟೋರಜ್‌ನಲ್ಲಿ ಇರಿಸಿದ್ದೆವು. ಇದೀಗ ಮಾಲೂ ಇಲ್ಲ ರೊಕ್ಕನೂ ಇಲ್ಲ ಎನ್ನುವಂತಾಗಿದ್ದು, ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ. ಈ ಬಗ್ಗೆ ಕೇಳಿದರೆ ಆರೋಪಿ ನಾಗಪ್ಪ ಹಣ ಕೊಡಲ್ಲ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಮತ್ತೊಂದು ಕೋಲ್ಡ್ ಸ್ಟೋರೇಜ್‌ನಲ್ಲಿ 48 ಚೀಲ ಮೆಣಸಿನಕಾಯಿ ಇಟ್ಟಿದ್ದೆವು. ಅವರೂ ನಮಗೆ ಬಿಲ್ ಕೊಡದೇ, ಮಾರಾಟ ಮಾಡಿ ಮೋಸ ಮಾಡಿದ್ದಾರೆ ಎಂದು ಮಹದೇವಪ್ಪ ದೂರಿದರು.
ಸ್ಪಂದಿಸದ ಪೊಲೀಸರು
ಬ್ಯಾಡಗಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಸುಮಾರು ಒಂದು ತಿಂಗಳು ಕಾಯಿಸಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಕಾದರೂ ನಮ್ಮ ಸಮಸ್ಯೆ ಆಲಿಸದೇ ಎಫ್‌ಐಆರ್ ದಾಖಲಿಸದೇ ಸತಾಯಿಸಿದ್ದಾರೆ. ರಾತ್ರಿ ಬೀದಿಯಲ್ಲಿ ಮಲಗಿ, ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ಉಪಾಹಾರ ಮಾಡಿ ಕಾಲ ಕಳೆದಿದ್ದೇವೆ. ನಮ್ಮ ಸಮಾಜದ ಮುಖಂಡರಿಂದ ಒತ್ತಡ ಹೇರಿದ ನಂತರ ಎಫ್‌ಐಆರ್ ಮಾಡಿಕೊಂಡಿದ್ದಾರೆ. ದಲ್ಲಾಳಿ ಅಂಗಡಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದರೆ, ನಿಮ್ಮನ್ನು ಒದ್ದು ಒಳಗೆ ಹಾಕುತ್ತೇವೆ ಎಂದು ಬ್ಯಾಡಗಿ ಪೊಲೀಸರು, ಅಧಿಕಾರಿಗಳು ಆವಾಜ್ ಹಾಕುತ್ತಾರೆ. ನೊಂದ ರೈತರ ಪರ ಇರಬೇಕಾದ ಪೊಲೀಸರು ತಪ್ಪಿಸ್ಥರ ಪರವಾಗಿ ಮಾತನಾಡುತ್ತಾರೆ. ಅಮಾಯಕ ರೈತರ ಧ್ವನಿ ಅಡಗಿಸಲು ಯತ್ನಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆಗೆ ಪರಿಹಾರ ಕೊಡಿಸಬೇಕು ಎಂದು ಮಹದೇವಪ್ಪ ಕುಟುಂಬದವರು ಒತ್ತಾಯಿಸಿದ್ದಾರೆ.
"

ಕೋಲ್ಡ್ ಸ್ಟೋರೇಜ್ ಮತ್ತು ಆರೋಪಿ ದಲ್ಲಾಳಿ ನಾಗಪ್ಪ ಹಡಗಲಿ ಕುರಿತು ಮಾಹಿತಿ ನೀಡಲು ಎಪಿಎಂಸಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದೇವೆ. ತಮ್ಮ ಬಳಿ ಇರುವ ದಾಖಲೆ ನೀಡಲು ರೈತರಿಗೂ ಸೂಚಿಸಿದ್ದೇವೆ. ನಾಗಪ್ಪನಿಗೂ ನೋಟಿಸ್ ನೀಡಿದ್ದೇವೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಜರುಗಿಸುತ್ತೇವೆ.

— ಭಾರತಿ ಕುರಿ, ಪಿಎಸ್‌ಐ, ಬ್ಯಾಡಗಿ ಪೊಲೀಸ್ ಠಾಣೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net