ಬಸ್ ಸಂಚಾರ ತಡೆದು ವಿದ್ಯಾರ್ಥಿಗಳ ಆಕ್ರೋಶ; ಸಮರ್ಪಕವಾಗಿ ಬಸ್ ಸೌಕರ್ಯ ಒದಗಿಸಲು ಆಗ್ರಹ

Haveri, Bus stand, Students, Protest, KSRTC DC, DTO,
Haveri, Bus stand, Students, Protest, KSRTC DC, DTO,
Published on
ಹಾವೇರಿ: ದೇವಗಿರಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜ್, ಇಜಾರಿ ಲಕಮಾಪುರದ ಸರ್ಕಾರಿ ಮಹಿಳಾ ಪಿಯು ಕಾಲೇಜ್ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಸಕಾಲಕ್ಕೆ ಓಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಎದುರು ಸೋಮವಾರ ದಿಡೀರ್ ಆಗಿ ಪ್ರತಿಭಟಿಸಿದರು. ಎಲ್ಲ ಬಸ್‌ಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಇಂಜನೀಯರಿಂಗ್ ಕಾಲೇಜ್ ವಿದ್ಯಾರ್ಥಿ ಅಭಿಷೇಕ ಮಾತನಾಡಿ, ಕಳೆದ ಕೆಲವು ದಿನಗಳಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ಮಹಿಳಾ ಕಾಲೇಜ್ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಸಕಾಲಕ್ಕೆ ಓಡಾಡುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಬಸ್ ನಿಲ್ದಾಣದ ಅಧಿಕಾರಿಗಳನ್ನು ಯಾವಾಗ ಕೇಳಿದರೂ ಮೂರು ಬಸ್ ಬಿಡಲಾಗಿದೆ. ಈಗಾಗಲೇ ಹೋಗಿವೆ, ಇನ್ನೇನು ಬರಬೇಕಿದೆ. ಬಂದ ಕೂಡಲೇ ಹತ್ತಿ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಬಸ್‌ಗಳ ಅನಾನುಕೂಲದಿಂದ ನಮಗೆ ಸಾಕಷ್ಟು ತೊಂದರೆ ಆಗುತ್ತಿದೆ. ಬಸ್ ತಡವಾಗುತ್ತಿರುವುದರಿಂದ ದಿನನಿತ್ಯ ಎರಡು ಕ್ಲಾಸ್‌ಗಳನ್ನು ಕಳೆದುಕೊಳ್ಳಬೇಕಾಗಿದೆ ಎಂದು ದೂರಿದರು.
ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿ ಸುಕನ್ಯಾ ಮಾತನಾಡಿ, ಈಗಾಗಲೇ ಬೆಳಗ್ಗೆ 8 ಮತ್ತು 8.30ರ ಸಮಯಕ್ಕೆ ಓಡಾಡುತ್ತಿದ್ದ ಕೆಲವು ಬಸ್‌ಗಳನ್ನು ಅರ್ಧ ಗಂಟೆ ತಡವಾಗಿ ಓಡಿಸುತ್ತಿದ್ದು ಇದರಿಂದ ದಿನನಿತ್ಯ ಬೆಳಗಿನ ಒಂದು ಅವಧಿಯ ತರಗತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ಅಧ್ಯಯನದಲ್ಲಿ ಹಿನ್ನಡೆ ಆಗುತ್ತಿದೆ. ಇದರಿಂದ ನಮ್ಮ ಭವಿಷ್ಯದಲ್ಲಿ ತೊದರೆಯಾಗುತ್ತಿದೆ. ಉಪನ್ಯಾಸಕರಿಂದಲೂ ಬೈಸಿಕೊಳ್ಳುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಮೌಖಿಕವಾಗಿ ದೂರು ನೀಡಿದ್ದು ಅದಕ್ಕೆ ಬಸ್ ನಿಲ್ದಾಣದ ಅಧಿಕಾರಿ, ಸಿಬ್ಬಂದಿ ಸಮಪರ್ಕವಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಹಾವೇರಿ ಕೇಂದ್ರ ಬಸ್ ನಿಲ್ದಾಣದಿಂದ ಬೆಂಗಳೂರು, ಹುಬ್ಬಳ್ಳಿ, ಹಾನಗಲ್ಲ, ಶಿವಮೊಗ್ಗ, ಶಿರಸಿ ಹೀಗೆ ಹೊರಹೋಗುವ ಎಲ್ಲ ಮಾರ್ಗದ ಬಸ್‌ಗಳನ್ನು ತಡೆದು ನಿಲ್ಲಿಸಿ ದೇವಗಿರಿ ಮಾರ್ಗದ ಬಸ್‌ಗಳನ್ನು ಸಕಾಲಕ್ಕೆ ಓಡಿಸಬೇಕು ಮತ್ತು ಈ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ಮಾರ್ಗದಲ್ಲಿ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳ ಸಂಖ್ಯೆಯೇ ಹೆಚ್ಚಿದ್ದು, ಬಡ, ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿದ್ದು, ಬಸ್‌ಗಳ ರೂಟ್ ಮತ್ತು ಬಸ್‌ಗಳನ್ನು ಹೆಚ್ಚಿಸುವಂತೆ ಆಗ್ರಹಿಸಿದರು.
ಡಿಟಿಒ ಭೇಟಿ, ಭರವಸೆ
ಸ್ಥಳಕ್ಕೆ ಸಾರಿಗೆ ಇಲಾಖೆಯ ಡಿಟಿಒ ಅಶೋಕ ಪಾಟೀಲ ಆಗಮಿಸಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಿಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಪತ್ರ ಬರೆದುಕೊಡಿ. ತಕ್ಷಣಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net