ನಾಡು ಕಂಡ ಧೀಮಂತ ನಾಯಕ ಬಿಎಸ್‌ವೈ; ಬಿಜೆಪಿ ಆಡಳಿತಕ್ಕೆ ಬರಲು ಅಭಿಮಾನೋತ್ಸವ ಮೊದಲ ಹೆಜ್ಜೆ; ಸಂಸದ ಬಸವರಾಜ ಬೊಮ್ಮಾಯಿ

Haveri, BSY, MP Bommai, BYR, Meeting,
Haveri, BSY, MP Bommai, BYR, Meeting,
Published on
ಹಾವೇರಿ: ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಕೂಡ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡ ನಾಡು ಕಂಡ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪನವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನನ್ನ ನೆಚ್ಚಿನ ನಾಯಕರ ಅಭಿಮಾನೋತ್ಸವ ಸಮಾರಂಭವಿದು. ತಮ್ಮ ಕಠಿಣ ಪರಿಶ್ರಮದಿಂದ ಜನನಾಯಕರಾದವರು ರಾಜಾಹುಲಿ ಯಡಿಯೂರಪ್ಪನವರು. ನಾವೆಲ್ಲ ಸಾರ್ವಜನಿಕ ಜೀವನಕ್ಕೆ ಬಂದಾಗ ನಮ್ಮದೇ ಆದ ಆದರ್ಶಗಳನ್ನು ಇಟ್ಟುಕೊಂಡು ಬಂದಿದ್ದೇವೆ. ನಮ್ಮ ಆದರ್ಶ ಮತ್ತು ಅಧಿಕಾರ ಎರಡರ ನಡುವೆ ಸಂಘರ್ಷ ಇರುತ್ತದೆ. ಆದರ್ಶ ತಾಯಿ ಇದ್ದ ಹಾಗೆ, ಅಧಿಕಾರ ಕಟ್ಟಿಕೊಂಡ ಹೆಂಡತಿ ಇದ್ದ ಹಾಗೆ. ತಾಯಿ ಜನ್ಮ ಕೊಟ್ಟಿದ್ದೇನೆ ನನ್ನ ಮಗ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಹೆಂಡತಿ ನಾನು ಇವನಿಗೊಸ್ಕರ ತವರು ಮನೆ ಬಿಟ್ಟು ಬಂದಿದ್ದೇನೆ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಕೂಡ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಯಡಿಯೂರಪ್ಪನವರಂತೆ ಧೀಮಂತ ನಾಯಕರಾಗುತ್ತಾರೆ ಎಂದರು.
ಹಾವೇರಿ ಜಿಲ್ಲೆಯ ಅಪ್ಪರ್ ತುಂಗಾ ಯೋಜನೆ ಜಾರಿಗೊಳಿಸಿದ್ದು ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರ. ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಅನೇಕ ಯೋಜನೆಗಳನ್ನು ಅವರ, ನಮ್ಮ ಕಾಲದಲ್ಲಿ ಮಾಡಲಾಯಿತು. ಈ ಜಿಲ್ಲೆ, ರಾಜ್ಯದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ. ಈಗ ಬಿಜೆಪಿಗೆ ಅವರ ಪ್ರೇರಣೆ, ಶಕ್ತಿ, ಆಶೀರ್ವಾದ ತುಂಬುವ ಅವಶ್ಯಕತೆ ಇದೆ. ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಕಷ್ಟದಲ್ಲಿ ಸಿಲುಕುವ ಸಂದರ್ಭದಲ್ಲಿ ಬಿಜೆಪಿ ಮತ್ತೆ ಪುಟಿದೇಳಲು ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಸಮಾರಂಭದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಡಿ.ಎಂ.ಸಾಲಿ, ಕಾರ್ಯಕರ್ತರು, ಇತರರಿದ್ದರು.
ಜಿಲ್ಲೆಯಿಂದ 1 ಲಕ್ಷ ಜನ
ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕ ಯಾವಾಗಲೂ ಶಕ್ತಿ ತುಂಬಿದೆ. ರಾಜಕೀಯವಾಗಿ ಅತಿ ಹೆಚ್ಚು ಸ್ಥಾನ ಕೊಟ್ಟಿದ್ದು ಉತ್ತರ ಕರ್ನಾಟಕ. ಬಿಜೆಪಿಗೆ ಸ್ಥಾನ ಕಡಿಮೆಯಾದಾಗಲೂ ಉತ್ತರ ಕರ್ನಾಟಕದ ಬಿ.ಸಿ.ಪಾಟೀಲರಂಥ ನಾಯಕರಿಂದ ಶಕ್ತಿ ಬಂದಿದೆ. ಮೇ 9ರಂದು ಜಿಲ್ಲೆಯಿಂದ 1 ಲಕ್ಷ ಜನರನ್ನು ಸೇರಿಸುವ ಪಯತ್ನ ಮಾಡಬೇಕು. ನಮ್ಮ ಅಭಿಮಾನದ ಶಕ್ತಿಯನ್ನು ಮೇ 9ಕ್ಕೆ ತೋರಿಸೋಣ ಎಂದು ಬೊಮ್ಮಾಯಿ ಕರೆ ನೀಡಿದರು.
"

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನರು ಮುಂದಿನ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವ ಜನರಲ್ಲಿ ಮತ್ತಷ್ಟು ಉತ್ಸಾಹ, ಚೈತನ್ಯ ಮೂಡಿಸಲಿದೆ.

— ಬಿ.ವೈ.ರಾಘವೇಂದ್ರ, ಸಂಸದ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net