ಬಿಎಸ್‌ವೈ ಸಮಾರಂಭಕ್ಕೆ ಜಿಲ್ಲೆಯಿಂದ 50 ಸಾವಿರ ಜನ; ಅಭಿಮಾನೋತ್ಸವ ತಯಾರಿ ಕುರಿತು ಮಾಜಿ ಸಚಿವ ಬಿ.ಸಿ.ಪಾಟೀಲ ಮಾಹಿತಿ

Haveri, BSY, Chitradurga, Programm, BC Patil, PC,
Haveri, BSY, Chitradurga, Programm, BC Patil, PC,
Published on
ಹಾವೇರಿ: ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ 50 ವರ್ಷ ಸುದೀರ್ಘವಾಗಿ ನಾಡಿನ ಸೇವೆ ಸಲ್ಲಿಸಿರುವ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವ ಸಮಾರಂಭಕ್ಕೆ ಜಿಲ್ಲೆಯಿಂದ 50 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 9ರಂದು ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಡಿನ ವಿವಿಧ ಮಠಾಧೀಶರು, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 10 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ ಈ ಸಮಾರಂಭದಲ್ಲಿ ಒಟ್ಟು 50 ಸಾವಿರ ಜನ ಭಾಗವಹಿಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸ್ವಂತ ಕಾರುಗಳು, ಬಾಡಿಗೆ ವಾಹನಗಳ ಮೂಲಕ ಭಾಗವಹಿಸಲಿದ್ದಾರೆ. ಬಿಎಸ್‌ವೈಗೂ ಜಿಲ್ಲೆಗೂ ಅವಿನಾಭಾವ ಸಂಬಂಧ ಇದ್ದು, ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಂದುವರಿಸಲು ಅಭಿಮಾನೋತ್ಸವ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾರ್ಯಕ್ರಮವನ್ನು ಬಿಎಸ್‌ವೈ ಅವರ ಮನೆಯವರು ಮುಂದೆ ನಿಂತು ಮಾಡುತ್ತಿಲ್ಲ. ಗೋವಿಂದ ಕಾರಜೋಳ ಹಾಗೂ ಇತರ ಕಾರ್ಯಕರ್ತರು ನಿಂತು ಮಾಡುತ್ತಿದ್ದೇವೆ. ಚುನಾವಣೆಗಾಗಿ ಬಿಎಸ್‌ವೈ ಅಭಿಮಾನೋತ್ಸವ ಮಾಡುತ್ತಿಲ್ಲ. ಇನ್ನೂ ಎರಡು ವರ್ಷ ಬಾಕಿ ಇದೆ. ಯಡಿಯೂರಪ್ಪ ಬಿಜೆಪಿ ಪಕ್ಷದ ಶಕ್ತಿ. ಅವರ ಅಭಿಮಾನದ ಸಮಾರಂಭ ಇದು. ಈ ಕಾರ್ಯಕ್ರಮದ ಮೂಲಕ ಕಾರ್ಯಕರ್ತರಲ್ಲಿ ಮತ್ತಷ್ಟು ಶಕ್ತಿ ತುಂಬಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಯುವ ಮುಖಂಡ ಭರತ ಬೊಮ್ಮಾಯಿ, ವಿಭಾಗೀಯ ಸಹ ಪ್ರಭಾರಿ ಭೋಜರಾಜ ಕರೂದಿ, ವಿಜಯಕುಮಾರ ಚಿನ್ನಿಕಟ್ಟಿ,ನಿರಂಜನ ಹೆರೂರ, ಇತರರಿದ್ದರು.
ಮುಖಂಡರ ಅಸಹನೆ ಸೋಲಿಗೆ ಕಾರಣ
ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆ ಸೋಲು ಕಾರ್ಯಕರ್ತರಿಂದ ಆಗಿದ್ದಲ್ಲ. ನಮ್ಮ ಪಕ್ಷದ ಮುಖಂಡರಲ್ಲಿನ ಸಣ್ಣಪುಟ್ಟ ಅಸಹನೆ ಈ ಸೋಲಿಗೆ ಕಾರಣವಾಗಿದೆ. ಇದನ್ನು ಸರಿಪಡಿಸಿಕೊಂಡರೆ ಮುಂದೆ ಉತ್ತಮ ಭವಿಷ್ಯ ಇದೆ. ಈ ಉಪಚುನಾವಣೆ ನಮ್ಮ ಮುಖಂಡರಿಗೆ ಪಾಠ ಆಗಬೇಕು. ಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಮಾಡಿ, ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಂಡರೆ ಮುಂದಿನ ಚುನಾವಣೆಯಲ್ಲಿ ಗೆಲುವು ಶತಸಿದ್ಧ ಎಂದು ಬಿ.ಸಿ.ಪಾಟೀಲರು ಸಲಹೆ ನೀಡಿದರು.
ಬೆಳೆವಿಮೆಗಾಗಿ ಪ್ರತಿಭಟನೆ ಇಂದು
ಹಿರೇಕೆರೂರ ತಾಲೂಕಿನ 23 ಹಳ್ಳಿಗಳ ರೈತರಿಗೆ ಬೆಳೆ ವಿಮೆ ಬಂದಿಲ್ಲ. ಈ ಕುರಿತು ರೈತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ, ಮೇ 6ರಂದು ಹಿರೇಕೆರೂರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬೆಳೆವಿಮೆಯಲ್ಲಿ ರೈತರಿಗೆ ಮೋಸ ಆಗಿದೆ. ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವಿಮೆ ಮಾಡಿಸಿದ್ದಾರೆ. ಇದರಿಂದ ರೈತರು ವಂಚಿತರಾಗಿದ್ದಾರೆ. ಬೆಳೆಹಾನಿಗೆ ಪರಿಹಾರ ಕೊಟ್ಟಿದ್ದಾರೆ. ಆದರೆ, ಬೆಳೆವಿಮೆ ಕೊಡುತ್ತಿಲ್ಲ. ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಹಂತಹಂತವಾಗಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು ಬಿ.ಸಿ.ಪಾಟೀಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net