ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಶಾಲಾ ಸಂಸತ್ ಉದ್ಘಾಟನೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು.
ವಿದ್ಯಾರ್ಥಿ ಧನುಷ್ ರೊಡ್ಡಗೌಡರ ಯಕ್ಷಗಾನದ ಮೂಲಕ ಸ್ವಾಗತ ನೃತ್ಯ ಮಾಡಿದನು. ಶಾಲಾ ಸಂಸತ್ತಿನ ನಾಯಕನಾಗಿ 10ನೇ ತರಗತಿ ವಿದ್ಯಾರ್ಥಿ ತರುಣ ಬಂಕಾಪುರ ಹಾಗೂ ಶಾಲಾ ಸಂಸತ್ತಿನ ನಾಯಕಿಯಾಗಿ ಸಿರಿ ಬನ್ನಿಹಳ್ಳಿ ಆಯ್ಕೆಯಾದರು. ಶಾಲಾ ಸಂಸತ್ತಿನ ಉಪನಾಯಕನಾಗಿ ಸುಹಾಸ ಹೊಸಮನಿ ಹಾಗೂ ಉಪನಾಯಕಿಯಾಗಿ ಸಿರಿ ಅಳ್ಳಪ್ಪನವರ ಆಯ್ಕೆಯಾಗಿದ್ದಾರೆ. ಸ್ವಚ್ಛತೆ ಹಾಗೂ ಕ್ರೀಡೆಯ ಹಾಗೂ ಎಲ್ಲ ಹೌಸ್‌ಗಳ ನಾಯಕ, ಉಪನಾಯಕರಿಗೆ ಅತಿಥಿಗಳು ಪ್ರಮಾಣವಚನ ಬೋಧಿಸಿದರು.
ನಿವೃತ್ತ ದೈಹಿಕ ಶಿಕ್ಷಕ ನಾಗರಾಜ ಇಚ್ಚಂಗಿ ಮಾತನಾಡಿ, ಶಾಲಾ ಸಂಸತ್ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದ್ದು, ಈ ಮೂಲಕ ಮಕ್ಕಳಲ್ಲಿ ಶಿಸ್ತು, ಸಂಯಮ ಮೂಡುವಂತೆ ಶಾಲಾ ಆಡಳಿತ ಮಂಡಳಿ ಎಚ್ಚರಿಕೆ ವಹಿಸಿದೆ. ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳುವ ಮೂಲಕ ಇತರರಿಗೆ ಮಾದರಿಯಾಗಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಎಂ. ಕಲಕೋಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಬೇಕಾದರೆ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ನಾನೂ ಕೂಡಾ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎರಡು ಬಾರಿ ಸಿಂಡಿಕೇಟ್ ಸದಸ್ಯನಾಗಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದೆ. ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ರೂಪುಗೊಳ್ಳಲು ಇಂತಹ ಅವಕಾಶಗಳು ಮೆಟ್ಟಿಲುಗಳಿದ್ದಂತೆ. ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಜನಿ ಸಿದ್ದರಾಜ ಕಲಕೋಟಿ, ಮುಖ್ಯ ಶಿಕ್ಷಕ ಡಾ.ಸಂತೋಷ ಕೃಷ್ಣಾಪುರ, ಶಿಕ್ಷಕಿಯರಾದ ಕಾವ್ಯ, ಸುನಿತಾ, ಇತರರು ಇದ್ದರು.