ಹಾವೇರಿ: ಜಿಲ್ಲೆಯಲ್ಲಿ ಶೇ.40ಕ್ಕಿಂತ ಹೆಚ್ಚು ಮಳೆ ಕೊರತೆ ಉಂಟಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ನಾರಾಯಣಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಜಿಲ್ಲೆಯ ಆರ್ಥಿಕ ವ್ಯವಸ್ಥೆಯು ರೈತರನ್ನೇ ಅವಲಂಬಿಸಿದೆ. ಸಕಾಲದಲ್ಲಿ ಮಳೆಯಾಗದ ಕಾರಣ ಬೆಳೆಗಳು ಹಾನಿಗೀಡಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. 2025-26ನೇ ಸಾಲಿನ ಬಾಕಿ ಉಳಿದಿರುವ ಬೆಳೆವಿಮೆ ಪರಿಹಾರವನ್ನು ಕೂಡಲೇ ರೈತರ ಖಾತೆಗಳಿಗೆ ಬಿಡುಗಡೆ ಮಾಡಬೇಕು. ಇತ್ತೀಚೆಗೆ ನಡೆಸಿದ ಮೋಡ ಬಿತ್ತನೆ ವೈಜ್ಞಾನಿಕ ರೀತಿಯಲ್ಲಿ ನಡೆದಿಲ್ಲ. ಮಳೆಯ ವಾತಾವರಣವಿದ್ದ ದಿನವೇ ಮೋಡ ಬಿತ್ತನೆ ನಡೆಸಿರುವುದರಿಂದ ಸಹಜವಾಗಿ ಬರಬೇಕಿದ್ದ ಮಳೆಯೂ ಬಾರದೇ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣವೇ ಬೆಳೆ ಪರಿಹಾರವನ್ನು ಘೋಷಿಸಬೇಕು. ಜಿಲ್ಲೆಯಲ್ಲಿ ನದಿಗಳಿಗೆ ನೀರು ಹರಿಯುವ ಸಂದರ್ಭದಲ್ಲೇ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಬೇಕು. ಜಿಲ್ಲೆಯ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಬೇಡ್ತಿ- ವರದಾ ನದಿ ಜೋಡಣೆ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲದ ಬಲವಂತದ ವಸೂಲಾತಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಬೆಳೆವಿಮೆ ಸ್ವಯಂ ಘೋಷಣಾ ಪತ್ರದ ನಿಯಮಗಳಲ್ಲಿ ಸಡಿಲಿಕೆ ತರಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.