ಕಾಂಗ್ರೆಸ್ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟ; ರೈತ ವಿರೋಧಿ ಸರ್ಕಾರ ಕಿತ್ತೆಸೆಯುವವರೆಗೆ ಬಿಡಲ್ಲ; ಬಿಜೆಪಿ ಪ್ರತಿಭಟನೆಯಲ್ಲಿ ಸಂಸದ ಬೊಮ್ಮಾಯಿ

BJP Protest
BJP Protest
Published on

ಪ್ರಮುಖ ಮುಖ್ಯಾಂಶಗಳು

  • ರೈತರ ಪರವಾಗಿ ಕಿಂಚಿತ್ತೂ ಕಾಳಜಿ ಇಲ್ಲದ, ರೈತ ವಿರೋಧಿ ರಾಜ್ಯ ಕಾಂಗ್ರೆಸ್
  • ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರ ಕಿತ್ತು ಎಸೆಯುವವರೆಗೆ ಬಿಜೆಪಿ ಹೋರಾಟ ನಿಲ್ಲಿಸಲ್ಲ
  • ಬೆಳಗಾವಿ ಅಧಿವೇಶನದಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತೇವೆ
  • ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಭರವಸೆ
ಹಾವೇರಿ: ರೈತರ ಪರವಾಗಿ ಕಿಂಚಿತ್ತೂ ಕಾಳಜಿ ಇಲ್ಲದ, ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರ ಕಿತ್ತು ಎಸೆಯುವವರೆಗೆ ಬಿಜೆಪಿ ಹೋರಾಟ ನಿಲ್ಲಿಸಲ್ಲ. ಹಳ್ಳಿ ಹಳ್ಳಿಗಳಲ್ಲಿ ಹೋರಾಟ ತೆಗೆದುಕೊಂಡು ಹೋಗುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ದೇವಗಿರಿಯ ಜಿಲ್ಲಾಡಳಿತ ಕಾರ್ಯಾಲಯದ ಎದುರು ಶುಕ್ರವಾರ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ತಾವು ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡಿದ್ದಾರೆ. ರೈತರು, ಬಡವರು, ಕೂಲಿಕಾರರು ನಿಮ್ಮ ಆಟವನ್ನು ನೋಡುತ್ತಿದ್ದಾರೆ. ಇದಕ್ಕೆ ತಕ್ಕ ಪಾಠವನ್ನು ನಿಮಗೆ ಕಲಿಸುತ್ತಾರೆ. ರೈತ ವಿರೋಧಿ ಸರ್ಕಾರವನ್ನು ಕಿತ್ತು ಎಸೆಯುವವರೆಗೆ ಹೋರಾಟ ನಡೆಸುತ್ತೇವೆ. ರೈತರನ್ನು ಎದುರು ಹಾಕಿಕೊಂಡರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.
ರೈತರು ಹಗಲಿರುಳು ಕಷ್ಟಪಟ್ಟು ಬೆವರು ಸುರಿಸಿ ದುಡಿದಿರುವ ಕಬ್ಬು, ಮೆಕ್ಕೆಜೋಳ, ಸೋಯಾಬಿನ್ ಬೆಲೆ ಕುಸಿದಿದೆ. ನ್ಯಾಯಯುತ ಬೆಲೆ ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ಅದಕ್ಕೆ ಇವರಿಗೆ ಸಮಯ ಇಲ್ಲ. ಸಿಎಂ ಕುರ್ಚಿಗಾಗಿ ನಿತ್ಯ ಜಗಳ ಆಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ಎಲ್ಲಿ ಸಿಎಂ ಕುರ್ಚಿ ಕಿತ್ತುಕೊಳ್ಳುತ್ತಾರೋ ಎಂದು ಸಿಎಂ ಕುರ್ಚಿ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ನಲವತ್ತು ವರ್ಷ ರಾಜಕಾರಣ ಮಾಡಿ, ಏಳು ವರ್ಷ ಸಿಎಂ ಆಗಿ ಕೆಲಸ ಮಾಡಿ ನಾನೇ ಸಿಎಂ ಎಂದು ಎದೆ ಬಡಿದುಕೊಳ್ಳುತ್ತಾರೆ. ಒಬ್ಬ ಮೇಧಾವಿ ರಾಜಕಾರಣಿ ಈ ರೀತಿ ಮಾತನಾಡುತ್ತಾರಾ ? ನಿಜವಾಗಲೂ ನಿಮಗೆ ಸ್ವಾಭಿಮಾನ ಇದ್ದರೆ ನನ್ನನ್ನು ತೆಗೆದು ನೋಡಿ ಎಂದು ಸವಾಲು ಹಾಕಿ ಕುರ್ಚಿ ಎಲ್ಲೂ ಹೋಗುವುದಿಲ್ಲ ಎಂದು ಸಲಹೆ ನೀಡಿದರು.
ನಮ್ಮ ರಾಜ್ಯದ ರೈತರ ಸಂಖ್ಯೆ 67 ಲಕ್ಷ ಇದೆ. ನೀವು ಪರಿಹಾರ ಕೊಟ್ಟಿರುವುದು ಕೇವಲ 14 ಲಕ್ಷ ರೈತರಿಗೆ. ಇನ್ನೂ 43 ಲಕ್ಷ ರೈತರಿಗೆ ಪರಿಹಾರ ಕೊಟ್ಟಿಲ್ಲ. ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರ, ಶಿಗ್ಗಾಂವಿ, ಹಾನಗಲ್ಲ, ಬ್ಯಾಡಗಿಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ. ಸಮೀಕ್ಷೆ ಸರಿಯಾಗಿಲ್ಲ. ಈ ಬಗ್ಗೆ ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಯಾವುದೇ ತಾಲೂಕಿನಲ್ಲಿ ಶೇ.10ರಷ್ಟು ನಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳು ಎಸಿ ರೂಮಲ್ಲಿ ಕುಳಿತು ಆಡಳಿತ ಮಾಡಬಾರದು. ರೈತರ ಹೊಲಕ್ಕೆ ಬಂದು ನೋಡಿ ಆಗ ಗೊತ್ತಾಗುತ್ತದೆ ಎಂದರು.
ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಮುಖಂಡರಾದ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಕೆ.ಶಿವಲಿಂಗಪ್ಪ, ಶೋಭಾ ನಿಸ್ಸಿಮಗೌಡ್ರ, ಭಾರತಿ ಅಳವಂಡಿ, ಸುರೇಶ ಹೊಸಮನಿ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಪಾಲಾಕ್ಷಗೌಡ ಪಾಟೀಲ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುನಾಥ ಮಡಿವಾಳರ, ರತ್ನಾ ಭಿಮಕ್ಕನವರ, ಚನ್ನಮ್ಮ ಬ್ಯಾಡಗಿ, ನಿಂಗರಾಜ ಕೋಡಿಹಳ್ಳಿ, ಶಂಭು ಹತ್ತಿ, ಗಿರೀಶ ಶೆಟ್ಟರ್, ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೋಟ್:
ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮಳೆ ಬಂದು ಅಪಾರ ಪ್ರಮಾಣದ ಹಾನಿ ಸಂಭವಿಸಿದರೂ ಯಾವುದೇ ಸಚಿವರು ರೈತರ ಹೊಲಕ್ಕೆ ಬರಲಿಲ್ಲ. ಕಂದಾಯ ಸಚಿವರು ವೈಮಾನಿಕ ಸಮೀಕ್ಷೆ ಮಾಡಿದರು. ಉತ್ತರ ಕರ್ನಾಟಕಕ್ಕೆ ಯಾರೂ ಕಾಲಿಡಲಿಲ್ಲ. ಉತ್ತರ ಕರ್ನಾಟಕ ಕರ್ನಾಟದಲ್ಲಿದೆ ಎಂಬುದನ್ನೇ ಮರೆತಿದೆ ಈ ಸರ್ಕಾರ. ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಗೋವಿನ ಜೋಳ ಬೆಳೆಯಲಾಗಿದೆ. ಗೋವಿನ ಜೋಳದಿಂದ ತಯಾರಾದ ವಸ್ತುವಿನಿಂದ 45 ಸಾವಿರ ಕೋಟಿ ರೂ. ತೆರಿಗೆ ಸರ್ಕಾಕ್ಕೆ ಬರುತ್ತದೆ. ಅದರಲ್ಲಿ 5 ಸಾವಿರ ಕೋಟಿ ಕೊಟ್ಟು ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು.
ಬಸವರಾಜ ಬೊಮ್ಮಾಯಿ, ಸಂಸದ
ಬಾಕ್ಸ್
ಕಲ್ಪಿತ ಶವಯಾತ್ರೆ
ದೇವಗಿರಿ ಗ್ರಾಮದಿಂದ ಜಿಲ್ಲಾಡಳಿತ ಕಚೇರಿವರೆಗೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ ಕಲ್ಪಿತ ಶವಯಾತ್ರೆ ನಡೆಸಲು ಮುಂದಾದಾಗ ಪೊಲೀಸರು ತಡೆದರು. ಹೀಗಾಗಿ, ಪ್ರತಿಭಟನೆ ವೇಳೆ ರೈತರೊಬ್ಬರನ್ನು ಹೊತ್ತು ಕಲ್ಪಿತ ಶವಯಾತ್ರೆ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರು ಸರ್ಕಾರಕ್ಕೆ ಕುಟುಕಿದರು.
ಕೋಟ್:
ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದ ನಾಲಾಯಕ ಸರ್ಕಾರ ಇದು. ರೈತರ ಕೊಳ್ಳೆ ಹೊಡೆಯುವ ಪಿಕ್ ಪಾಕೆಟ್ ಸರ್ಕಾರ ಇದು. ಕೃಷಿ ಸಚಿವ ಚಲುವರಾಯಸ್ವಾಮಿ ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಗೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಜಿಲ್ಲೆಯ ಶಾಸಕರಿಗೆ ರೈತರಿಗೆ ಬೆಳೆಹಾನಿ ಪರಿಹಾರ ಕೊಡಿಸುವ ಬಗ್ಗೆ ಇಚ್ಛಾಶಕ್ತಿಯೇ ಇಲ್ಲ.
ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧ್ಯಕ್ಷ, ಬಿಜೆಪಿ
ಕೋಟ್:
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಸಂಪೂರ್ಣವಾಗಿ ದಿವಾಳಿ ಆಗಿದೆ. ರೈತರ ಬಗ್ಗೆ ನಿರ್ಲಕ್ಷೃ ತೋರುತ್ತಿದೆ. ಎಲ್ಲ ಬೆಳೆಗಳಿಗೆ ಕೇಂದ್ರ ಸರ್ಕಾರ ನಿರ್ದಿಷ್ಟ ಬೆಲೆ ಕೊಟ್ಟಿದೆ. ಅದನ್ನು ಮುಚ್ಚಿಟ್ಟು ಈ ರೀತಿ ನಾಟಕ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಇದು ಭಾವನೆಗಳೇ ಇಲ್ಲದ ಸರ್ಕಾರ.
ಹೇಮಲತಾ ನಾಯಕ, ಎಂಎಲ್‌ಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net