ಸಿಎಂ ಡಿಕೆಶಿ ರಿಯಲ್ ಎಸ್ಟೇಟ್‌ನಲ್ಲಿ ಬಿಸಿ; ಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು; ರಾಜ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

Haveri, BJP, BY Vijayendra, Bommai, Protest, Against, State, Govt,
Haveri, BJP, BY Vijayendra, Bommai, Protest, Against, State, Govt,
Published on
ಹಾವೇರಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕೇವಲ ರಿಯಲ್ ಎಸ್ಟೇಟ್ ಮಾಡುತ್ತ ಕುಳಿತಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಇಂತಹ ರೈತ ವಿರೋಧಿ, ಜನ ವಿರೋಧಿ ಸರ್ಕಾರವನ್ನು ಕಿತ್ತೆಸೆಯುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆ ಸೇರಿದಂತೆ ರಾಜ್ಯದಲ್ಲಿನ ಹಿಂದುಗಳ ಹತ್ಯೆ, ಮತ್ತಿತರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಪ್ಪಳ, ಹಾವೇರಿ ಜಿಲ್ಲೆಯ ನರೇಗಲ್ಲ, ರಟ್ಟಿಹಳ್ಳಿ, ರಾಣೆಬೆನ್ನೂರ ಸೇರಿದಂತೆ ರಾಜ್ಯದಲ್ಲಿ ನಡೆದ ಘಟನೆಗಳಲ್ಲಿ ಆಡಳಿತ ಪಕ್ಷದ ಯಾವೊಬ್ಬ ಸಚಿವರು, ಶಾಸಕರು ಅವರಿಗೆ ಸಾಂತ್ವನ ಹೇಳಲಿಲ್ಲ. ಅವರ ಮನೆಗಳಿಗೆ ಭೇಟಿ ಕೊಡಲಿಲ್ಲ. ಕೇವಲ ಪರಿಹಾರದ ಚೆಕ್ ಕಳುಹಿಸಿ ಕೈತೊಳೆದುಕೊಂಡಿದ್ದಾರೆ. ಈ ಮೂಲಕ ಇದು ಹಿಂದು ವಿರೋಧಿ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದರು.
ಭ್ರಷ್ಟ ಹಾಗೂ ಹಿಂದು ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಹಿಂದುಗಳ ಮೇಲೆ ಹತ್ಯೆ, ಕೊಲೆ ಆಗುತ್ತಿವೆ. ರಾಜ್ಯ ಸರ್ಕಾರ ಕೇವಲ ಮುಸ್ಲಿಮರ ಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಚುನಾವಣೆ ಸಂದರ್ಭದಲ್ಲಿ ಅಹಿಂದ, ಒಬಿಸಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ಈಗ ಅವರೆಲ್ಲರನ್ನೂ ಮರೆತಿದೆ ಈ ಸರ್ಕಾರ. ಮುಸ್ಲಿಂ ತುಷ್ಟೀಕರಣದಲ್ಲಿ ದುರಾಡಳಿತಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಜನರೇ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮತೀಯ ಶಕ್ತಿಗಳಿಗೆ ಸಹಕಾರ ನೀಡುತ್ತಿರುವ ಪರಿಣಾಮ ಇಂತಹ ಘಟನೆಗಳು ಜರುಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳಿಂದ ಹಿಂದುಗಳ ಬರ್ಬರ ಹತ್ಯೆಗಳು ಆಗುತ್ತಿದ್ದವು. ಇದರ ಪರಿಣಾಮ ಬಂಗಾಳದಲ್ಲಿ ಇಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲೂ ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದುಗಳ ಮೇಲಿನ ಇಂತಹ ದೌರ್ಜನ್ಯಗಳು ಡಿ.ಕೆ.ಶಿವಕುಮಾರ ಬ್ರದರ್ಸ್‌ಗಳಿಂದ ನಡೆಯುತ್ತಿದೆ. ಒಬಿಸಿ, ದಲಿತ ವರ್ಗದವರ ಮೇಲೆ ನಿರಂತರವಾಗಿ ಈ ಡಿಕೆಶಿ ಕುಕ್ಕರ್ ಬ್ರದರ್ಸ್ ಅಮಾಯಕರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಪಾನ್‌ಶಾಪ್‌ಗಳಲ್ಲಿ ಮಟಕಾ, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ. ಎಲ್ಲಿ ಹೋದರೂ ಡ್ರಗ್ಸ್ ಸಿಗುತ್ತಿದೆ. ನಾವು ಪ್ರತಿಭಟನೆ ಮಾಡಿದಾಗ ಒಂದೆರೆಡು ಕೇಸ್ ಹಿಡಿದು ಸುಮ್ಮನಾಗುತ್ತಾರೆ. ಈವರೆಗೆ ಒಬ್ಬ ಪೆಡ್ಲರ್‌ಅನ್ನೂ ಹಿಡಿದಿಲ್ಲ. ಅಕ್ರಮ ದಂಧೆಕೋರರಿಗೆ ಪೊಲೀಸರು ಪಾರ್ಟನರ್ ಆಗಿದ್ದಾರೆ. ಪೊಲೀಸ್ ಸ್ಟೇಶನ್‌ಗಳ ಏಜೆಂಟರಿಗೆ ಒಂದು ಯೂನಿಫಾರಂ ಕೊಟ್ಟುಬಿಡಿ. ಅಧಿಕಾರಿಗಳ ಬದಲಿಗೆ ಅವರೇ ಕೆಲಸ ಮಾಡಿ ಎಂದು ಛೇಡಿಸಿದರು.
ಸವಣೂರು ಪಟ್ಟಣದಲ್ಲಿ ಒಬ್ಬ ಶಿಕ್ಷಕರನ್ನು ಹೊಡೆದು ಮೆರವಣಿಗೆ ಮಾಡಿದರು. ಶಿಗ್ಗಾಂವನಲ್ಲಿ ಹಾಡಹಗಲೇ ಕೊಲೆ ಆಯ್ತು. ಅಲ್ಲಿ ಕೊಲೆಗಡುಕರ ಜೊತೆಗೆ ರಾಜೀ ಮಾಡಲು ಖಾಕಿಪಡೆ ಯತ್ನಿಸಿತು. ಹಾನಗಲ್ಲ ಗ್ಯಾಂಗ್‌ರೇಪ್ ಆರೋಪಿಗಳು ಜಾಮೀನು ಪಡೆದು ಯುದ್ಧ ಗೆದ್ದವರಂತೆ ಮೆರವಣಿಗೆ ನಡೆಸಿದರು. ಇಂತಹ ಘಟನೆಗಳು ಜರುಗಿದಾಗ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದರೆ ನರೇಗಲ್ಲ, ರಟ್ಟೀಹಳ್ಳಿ, ರಾಣೆಬೆನ್ನೂರು ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಶಾಸಕರಾದ ಭೈರತಿ ಬಸವರಾಜ, ಎಸ್.ವಿ.ಸಂಕನೂರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಯುವ ಮುಖಂಡ ಭರತ ಬೊಮ್ಮಾಯಿ, ಶರಣು ತಳ್ಳಿಕೇರಿ, ಭೋಜರಾಜ ಕರೂದಿ, ಸಂತೋಷ ಆಲದಕಟ್ಟಿ, ಮತ್ತಿತರರು ಪಾಲ್ಗೊಂಡಿದ್ದರು.
ಪ್ರತಿಭಟನಾ ರ‌್ಯಾಲಿ :
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರಿದ್ದ ಪ್ರತಿಭಟನಾ ರ‌್ಯಾಲಿ ಆರಂಭವಾಯಿತು. ಎಂಜಿ ರಸ್ತೆ ಮೂಲಕ ಗಾಂಧೀ ವೃತ್ತದಲ್ಲಿ ಕೊನೆಗೊಂಡಿತು. ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.
"

ಸಿದ್ದರಾಮಯ್ಯನವರೇ ಎಲ್ಲಿದೆ ನಿಮ್ಮ ಅಹಿಂದ. ಅಧಿಕಾರಕ್ಕಾಗಿ ಏನೆಲ್ಲ ಮಾಡಬಾರದು ಅದನ್ನು ಮಾಡುತ್ತಿದೆ ನಿಮ್ಮ ಸರ್ಕಾರ. ಎಸ್‌ಪಿ, ಎಎಸ್‌ಪಿ, ಇನ್ಸ್‌ಪೆಕ್ಟರ್, ಪಿಎಸ್‌ಐನಿಂದ ಹಿಡಿದು ಎಲ್ಲರೂ ದುಡ್ಡು ಕೊಟ್ಟು ಪೋಸ್ಟಿಂಗ್ ಪಡೆದಿದ್ದಾರೆ. ಹೀಗಾಗಿ, ಅವರು ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಇದು ನೇರವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀಳುತ್ತಿದೆ.

— ಬಸವರಾಜ ಬೊಮ್ಮಾಯಿ, ಸಂಸದ, ಮಾಜಿ ಸಿಎಂ


"

ಭ್ರಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಗಳು ಸೇರಿದಂತೆ ಜನಸಾಮಾನ್ಯರು ನೆಮ್ಮದಿ ಕಳೆದುಕೊಂಡಿದ್ದಾರೆ. ಜನವಿರೋಧಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. 2028ರಲ್ಲಿ ವಿಧಾನಸೌಧಲ್ಲಿ ಮತ್ತೆ ಬಿಜೆಪಿ ಧ್ವಜ ಹಾರಿಸಲು ಬಿಜೆಪಿ ಕಾರ್ಯಕರ್ತರೆಲ್ಲ ಸೇರಿ ಇಂದಿನಿಂದಲೇ ಯುದ್ದೋಪಾದಿಯಲ್ಲಿ ಕೆಲಸ ಮಾಡಲು ಸಜ್ಜಾಗೋಣ.

— ಬಿ.ಸಿ.ಪಾಟೀಲ, ಮಾಜಿ ಕೃಷಿ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net