ಬಿಜೆಪಿ ಜಿಲ್ಲಾಧ್ಯಕ್ಷರು ಆರೋಪ ಸಾಬೀತುಪಡಿಸಲಿ; ಇಲ್ಲವೇ ಕ್ಷಮೆಯಾಚಿಸಲಿ; ಅಂಜುಮನ್ ಸಂಸ್ಥೆ ಸಮಿತಿ ಸದಸ್ಯ ಇರ್ಫಾನ್‌ಖಾನ್ ಪಠಾಣ ಆಗ್ರಹ

anjuman commitee
anjuman commitee
Published on
ಹಾವೇರಿ: ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಅವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ. ಒಂದು ವಾರದೊಳಗೆ ಅವರು ಸಮಾಜದ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಹಾವೇರಿ ಅಂಜುಮನ್ ಎ ಇಸ್ಲಾಂ ಕಮೀಟಿ ಸದಸ್ಯ ಇರ್ಫಾನ್‌ಖಾನ್ ಪಠಾಣ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದೂ-ಮುಸಲ್ಮಾನರು ಭಾವೈಕ್ಯತೆಯಿಂದ ಇದ್ದಾರೆ. ಯಾವುದೇ ಹಬ್ಬ ಹರಿದಿನಗಳು ಬಂದರೂ ಎಲ್ಲ ಸಮಾಜದವರು ಒಂದಾಗಿ ಆಚರಿಸುತ್ತಾರೆ. ಹೀಗಿರುವಾಗ ಫೆ.11ರಂದು ಅಂಜುಮನ್ ಕಮೀಟಿ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಯಾರದೋ ಮಾತು ಕೇಳಿ ಮುಸ್ಲಿಂ ಸಮಾಜವನ್ನು ಟಾರ್ಗೆಟ್ ಮಾಡಿ ನಿಂದಿಸಿರುವುದು ಸರಿಯಲ್ಲ ಎಂದರು.
ಚುನಾವಣೆಗೆ ಭದ್ರತೆ ಕೇಳಲು ಹಾವೇರಿ ಶಹರ ಠಾಣೆ ಹೋಗಿದ್ದಾಗ ಸಮಿತಿ ಮೂರು ವರ್ಷ ಶಾಂತಿಯುತವಾಗಿ ಕೆಲಸ ಮಾಡಿದ್ದಕ್ಕೆ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ಅವರು ನಮ್ಮನ್ನು ಸನ್ಮಾನಿಸಿದ್ದರು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಇದರಲ್ಲಿ ತಪ್ಪಿದ್ದರೆ ಕಾನೂನು ಕ್ರಮ ಜರುಗಿಸಲಿ. ಈ ಕುರಿತು ವಿರೋಧ ವ್ಯಕ್ತಪಡಿಸುವ ಭರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ಸನ್ಮಾನಿತರಲ್ಲಿ ಹಲವು ಕೇಸ್ ಇರುವವರು ಇದ್ದಾರೆ. ಪೊಲೀಸರು ಕಳ್ಳರು, ಸುಳ್ಳರು, ಮೋಸಗಾರರನ್ನು ಸನ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಸನ್ಮಾನಿತರಲ್ಲಿ ಒಬ್ಬರ ಮೇಲೂ ಒಂದೂ ಕೇಸ್ ಇಲ್ಲ. ಹಾಗೇನಾದರೂ ಇದ್ದಲ್ಲಿ ಒಂದು ವಾರದೊಳಗೆ ಅವರು ಸಾಬೀತು ಪಡಿಸಬೇಕು. ಇಲ್ಲವೇ ಬೇಷರತ್ ಸಮಾಜದ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಕಮೀಟಿ ಸದಸ್ಯರಾದ ಜಮೀರ್ ಜಿಗರಿ, ಮುಜಾಫರ ಕೊಟ್ಟಿಗೇರಿ, ಚಮನಶರೀಫ ಮುಲ್ಲಾ, ಅನ್ವರ ಕಡೇಮನಿ, ವಾಸೀಂ ಸನ್ನುಖಾನವರ, ಹಜರತ್‌ಅಲಿ ತಹಸೀಲ್ದಾರ್, ಖಾಸೀಂಸಾಬ ಅಗಡಿ, ಸಾಧಿಕ ಸವಣೂರ, ಹಸನರಜಾಕ ಅತ್ತಾರ, ಬಾಬುಲಾಲ್ ಬಾಲೇಬಾಯಿ, ಖಮರ್‌ಅಲಿ ಕಲ್ಯಾಣಿ, ಗೌಸ್ ಹತ್ತಿಕಾಳ, ಐಸ್ಪಾಕ ಹಸನ್‌ವಾಲೆ ಇದ್ದರು.
ತಂಜೀಮ್ ಅವಾಜ್ ಎ ಹಕ್‌ಗೆ ಗೆಲುವು
ಫೆ.15ರಂದು ನಡೆದ ಚುನಾವಣೆಯಲ್ಲಿ ಒಟ್ಟು 33 ಸ್ಥಾನಗಳಿಗೆ 77 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ತಂಜೀಮ್ ಅವಾಜ್ ಎ ಹಕ್ ಹಾಗೂ ಅಲ್ ಕಲಮ್ ಎಂಬ ಹೆಸರಿನ ತಂಡಗಳು ಸ್ಪರ್ಧಿಸಿದ್ದವು. ತಂಜೀಮ್ ಅವಾಜ್ ಎ ಹಕ್ ತಂಡದ 22 ಜನ, ಅಲ್ ಕಲಮ್ ತಂಡದ 10 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಸೇರಿ 33 ಜನ ಗೆಲುವು ಸಾಧಿಸಿದ್ದಾರೆ. ತಂಜೀಮ್ ಅವಾಜ್ ಹಕ್ ತಂಡಕ್ಕೆ ಸ್ಪಷ್ಟ ಬಹುಮತ ಇದ್ದು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರದಲ್ಲಿ ನಡೆಸಲಾಗುವುದು. ನೂತನ ಕಮಿಟಿಯಿಂದ ಕಾಲೇಜ್ ಸ್ಥಾಪಿಸಲಾಗುವುದು. ಶಿಕ್ಷಣಕ್ಕೆ ಒತ್ತು ನಿಡಲಾಗುವುದು. ದಾನಮ್ಮದೇವಿ ಗುಡಿ ಎದುರಿನ ವಾಣಿಜ್ಯ ಮಳಿಗೆ ಕೇಸ್ ಹೈಕೋರ್ಟ್‌ನಲ್ಲಿದ್ದು, ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ಇರ್ಫಾನ್‌ಖಾನ್ ಪಠಾಣ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net