ಹಾವೇರಿ: ತಾಲೂಕಿನ ಭರಡಿ ಗ್ರಾಮದ ನಿವೇಶನ ರಹಿತ, ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೇ ಜಾಗ ಒದಗಿಸಿ ಅವರಿಗೆ ಸೂರು ಕಲ್ಪಿಸಲಾಗುವುದು ಎಂದು ಶಾಸಕ ರುದ್ರಪ್ಪ ಲಮಾಣಿ ಭರವಸೆ ನೀಡಿದರು.
ಭರಡಿ ಗ್ರಾಮದಲ್ಲಿ ಶುಕ್ರವಾರ ಸರ್ಕಾರಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದರು. ಸೂರು ಎಷ್ಟು ಮುಖ್ಯವೋ ಅದರ ಜತೆಗೆ ಜೀವ ವೈವಿಧ್ಯತೆಗೆ ಅರಣ್ಯವೂ ಮುಖ್ಯವಾಗಿದೆ. ಅದಕ್ಕಾಗಿ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲು ಪ್ರಯತ್ನಿಸೋಣ ಎಂದರು.
ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು 222 ಎಕರೆ ಸರ್ಕಾರಿ ಜಮೀನಿದೆ. ಈ ಪೈಕಿ 30 ಎಕರೆ 36 ಗುಂಟೆ ಅರಣ್ಯ ಇಲಾಖೆಗೆ ಸೇರಿದೆ. ಉಳಿದ ಸುಮಾರು 186 ಎಕರೆ ಕಂದಾಯ ಇಲಾಖೆಗೆ ಸೇರಿದೆ. ಅದರಲ್ಲಿ 126 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ತಹಸೀಲ್ದಾರ್ ಮುಂದಾಗಿದ್ದಾರೆ. ಈ ಜಮೀನಿನಲ್ಲಿ ಶೇ.90ರಷ್ಟು ಕುಟುಂಬಗಳು ವಾಸಿಸುತ್ತಿವೆ. ಯಾವುದೇ ಕಾರಣಕ್ಕೂ ಈ ಜಾಗೆಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ತಹಸೀಲ್ದಾರ್ ಕೆ.ಶರಣಮ್ಮ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಮೈದೂರ, ಹನುಮಂತಪ್ಪ ಸಿದ್ದಾಪುರ, ಹನುಮಂತಪ್ಪ ಹುಚ್ಚಣ್ಣನವರ, ಬೀರಪ್ಪ ಪೂಜಾರ, ಗ್ರಾಮಸ್ಥರು, ಇತರರಿದ್ದರು.