ಬೇಡ್ತಿ- ವರದಾ ನದಿ ಜೋಡಣೆ ಡಿಪಿಆರ್ ಬಿಡುಗಡೆ ಮಾಡಿ; ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಮಂಜುನಾಥ ಕುನ್ನೂರ ಆಗ್ರಹ

 ex mp kunnur,
ex mp kunnur,
Published on
ಹಾವೇರಿ: ಬೇಡ್ತಿ- ವರದಾ ನದಿಗಳ ಜೋಡಣೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್‌ಭೂಷಣ ಚೌಧರಿ ಹೇಳಿದ್ದು, ಈ ಕೂಡಲೇ ಡಿಪಿಆರ್ ಬಿಡುಗಡೆ ಮಾಡಬೇಕು ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಸತ್‌ನಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ ಪ್ರಶ್ನೆಗೆ ಅವರು ಉತ್ತರ ನೀಡಿದ್ದು, ಈ ಬಗ್ಗೆ ಅಸ್ಪಷ್ಟತೆ ಕಾಣುತ್ತಿದೆ. ಎನ್‌ಡಬ್ಲೂೃಡಿಎ ಮೂಲಗಳ ಮಾಹಿತಿ ಪ್ರಕಾರ ಡಿಪಿಆರ್‌ಗೆ ಟೆಂಡರ್ ಆಗಿಲ್ಲ. ಯಾವುದೇ ಏಜೆನ್ಸಿಗೆ ಒಪ್ಪಿಗೆ ಸೂಚಿಸಿಲ್ಲ. ಹೀಗಿರುವಾಗ ಹೇಗೆ ಡಿಪಿಆರ್ ಸಿದ್ಧವಾಗುತ್ತದೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸಚಿವರು ಸ್ಪಷ್ಟಪಡಿಸಬೇಕು. ಈ ಹಿಂದೆ ತಯಾರಾಗಿದ್ದ ಆಲ್ಟರನೇಟ್-1ರ ಅನ್ವಯ ಡಿಪಿಆರ್ ಸಿದ್ಧವಾಗಿದ್ದರೆ ಅದಕ್ಕೆ ತಿದ್ದುಪಡಿ ತಂದು ಹಾವೇರಿ ಜಿಲ್ಲೆಯ ಅಚ್ಚುಕಟ್ಟು ಭಾಗದ ಜನರಿಗೆ ಅನುಕೂಲ ಆಗುವಂತೆ ಡ್ಯಾಮ್ ನಿರ್ಮಾಣ ಮಾಡಬೇಕು ಎಂಬುದನ್ನು ಸೇರಿಸಬೇಕು.
ಆಲ್ಟರನೇಟ್- 2ರ ಅನ್ವಯ ಡಿಪಿಆರ್ ಆಗಿದ್ದರೆ ಅದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಅದರ ಪ್ರಕಾರ, ಗದಗ ಜಿಲ್ಲೆಯ ಹಿರೇವಡ್ಡಟ್ಟಿವರೆಗೆ ಸುಮಾರು 170 ಕಿಮೀವರೆಗೆ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವ ಯೋಜನೆ ಅದಾಗಿದೆ. ಇದರಿಂದ ಹಾವೇರಿ ಜಿಲ್ಲೆಗೆ ಯಾವುದೇ ಅನುಕೂಲ ಆಗುವುದಿಲ್ಲ. ಹಾಗಾಗಿ, ಆಲ್ಟರನೇಟ್ 2ಕ್ಕೆ ಹಾವೇರಿ ಜನತೆ ಮತ್ತು ನನ್ನ ವಿರೋಧವಿದೆ ಎಂದು ಬೇಡ್ತಿ- ವರದಾ ನದಿಗಳ ಜೋಡಣೆ ಹಾಗೂ ನೀರಾವರಿ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಮಂಜುನಾಥ ಕುನ್ನೂರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net