ಮಹಿಳೆಯರು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ; ಹೆರಿಗೆ ಪೂರ್ವ, ನಂತರದಲ್ಲಿ ಮಗುವಿನ ಆರೈಕೆ ಮುಖ್ಯ * ಆರೋಗ್ಯ ಅರಿವು ಸಮಾರಂಭದಲ್ಲಿ ಡಾ.ಶಂಭುಲಿಂಗ ಬಂಕೊಳ್ಳಿ ಸಲಹೆ

haveri, Basaveshwara Nagara, mahila Vedike, Doctors Day,
haveri, Basaveshwara Nagara, mahila Vedike, Doctors Day,
Published on
ಹಾವೇರಿ: ಮಹಿಳೆಯರ ಆರೋಗ್ಯವೇ ಕುಟುಂಬದ ಆರೋಗ್ಯದ ಮೂಲವಾಗಿದ್ದು, ಗರ್ಭಿಣಿಯರು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಮತೋಲನ ಆಹಾರ ಸೇವಿಸಬೇಕು. ರಕ್ತಹೀನತೆಯನ್ನು ತಡೆಯಲು ಕಬ್ಬಿಣ ಮತ್ತು ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸುವುದು ಅಗತ್ಯವಾಗಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಶಿವಮೊಗ್ಗದ ಹಿರಿಯ ಮಕ್ಕಳ ತಜ್ಞ ಡಾ.ಶಂಭುಲಿಂಗ ಬಂಕೊಳ್ಳಿ ಸಲಹೆ ನೀಡಿದರು.
ಬಸವೇಶ್ವರ ನಗರ ಮಹಿಳಾ ನಾಗರಿಕರ ವೇದಿಕೆ ವತಿಯಿಂದ ವೈದ್ಯರ ದಿನಾಚರಣೆಯ ಅಂಗವಾಗಿ ಸರೋಜಿನಿ ಬನ್ನೂರ ಅವರ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೆರಿಗೆ ಪೂರ್ವ ಹಾಗೂ ಹೆರಿಗೆ ನಂತರ ತಾಯಿ ಮತ್ತು ಮಗುವಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅತ್ಯುತ್ತಮ ಆಹಾರವಾಗಿದ್ದು, ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ, ಸಮಯಕ್ಕೆ ಸರಿಯಾದ ಲಸಿಕೆ, ಸ್ವಚ್ಛತೆ ಮತ್ತು ಮುಖ್ಯವಾಗಿದೆ. ಮಕ್ಕಳಲ್ಲಿ ಜ್ವರ, ಅತಿಸಾರ, ಉಸಿರಾಟದ ತೊಂದರೆ ಮೊದಲಾದ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ದಂತ ವೈದ್ಯೆ ಡಾ.ಸೌಮ್ಯ ಬಂಕೊಳ್ಳಿ ಮಾತನಾಡಿ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಅತಿಯಾದ ಸಿಹಿ ಪದಾರ್ಥಗಳನ್ನು ಕಡಿಮೆ ಸೇವಿಸುವುದು ಮತ್ತು ಆರು ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಿಕೊಳ್ಳಬೇಕು. ವಿಶೇಷವಾಗಿ ಗರ್ಭಿಣಿಯರು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೂ ಉತ್ತಮ ಪರಿಣಾಮ ಉಂಟಾಗುತ್ತದೆ ಎಂದರು.
ಯೋಗ, ಪ್ರಾಣಾಯಾಮ, ನಿಯಮಿತ ವ್ಯಾಯಾಮ, ಉತ್ತಮ ಆಹಾರ ಪದ್ಧತಿ, ಮಾನಸಿಕ ನೆಮ್ಮದಿ, ಸ್ವಚ್ಛತೆ, ಸಮರ್ಪಕ ನಿದ್ರೆ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ವೈದ್ಯರು ವಿವರಿಸಿದರು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ಉಪನ್ಯಾಸದ ಬಳಿಕ ವೈದ್ಯರು ವೇದಿಕೆಯ ಮಹಿಳಾ ಸದಸ್ಯರೊಂದಿಗೆ ಗರ್ಭಧಾರಣೆ, ಹೆರಿಗೆ, ಮಕ್ಕಳ ಆರೈಕೆ, ಪೌಷ್ಟಿಕ ಆಹಾರ, ಲಸಿಕೆ, ಇತರ ಸಮಸ್ಯೆಗಳ ಕುರಿತು ಚರ್ಚಿಸಿದರು.
ವೇದಿಕೆಯ ಅಧ್ಯಕ್ಷೆ ಶಶಿಕಲಾ ಮಠದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಮತಾ ಹಿಂಚಿಗೇರಿ, ಖಜಾಂಚಿ ಶಶಿರೇಖಾ ಮಾಗನೂರ, ರತ್ನಾ ಭೀಮಕ್ಕನವರ, ರೇಣುಕಾ ನರಗುಂದ, ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ರಾಜೇಶ್ವರಿ ಬಿಷ್ಟನಗೌಡರ ಪ್ರಾರ್ಥಿಸಿದರು. ಸರೋಜಿನಿ ಬನ್ನೂರ ಸ್ವಾಗತಿಸಿದರು. ಸರೋಜಾ ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟರ್ ಹಾಗೂ ಮಧುಮತಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net