ಹಾವೇರಿ: ಜಿಲ್ಲಾಡಳಿತದಿಂದ ಜಗಜ್ಯೋತಿ ಶ್ರೀ ಬಸವೇಶ್ವರರ ಹಾಗೂ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಏ.20, 21ರಂದು ಆಚರಿಸಲಾಗುವುದು. ಅರ್ಥಪೂರ್ಣ ಹಾಗೂ ವಿಜಂಭಣೆಯಿಂದ ಜಯಂತ್ಯುತ್ಸವ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಗಜ್ಯೋತಿ ಶ್ರೀ ಬಸವೇಶ್ವರ, ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ ಮಾಡುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಮುಖಂಡರೊಂದಿಗೆ ಚರ್ಚಿಸಿ, ಶ್ರೀ ಬಸವೇಶ್ವರ ಜಯಂತಿ ಏ.20ರಂದು ಬೆಳಗ್ಗೆ 9 ಗಂಟೆಗೆ ಆಚರಿಸಲು ನಿರ್ಧರಿಸಲಾಯಿತು. ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬೆಳಗ್ಗೆ 10 ಗಂಟೆಗೆ ಹಾವೇರಿ ನಗರದ ಹುಕ್ಕೇರಿ ಮಠದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಸಂಜೆ 4 ಗಂಟೆಗೆ ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಲು ನಿರ್ಧರಿಸಲಾಯಿತು.
ಏ.21ರಂದು ಬೆಳಗ್ಗೆ 10ಕ್ಕೆ ನಗರದ ಸೀತಾರಾಮ ಮಂಗಲ ಕಾರ್ಯಾಲಯದಲ್ಲಿ ಶಂಕರಾಚಾರ್ಯರ ಜಯಂತಿ ವೇದಿಕೆ ಕಾರ್ಯಕ್ರಮ ಹಾಗೂ ಸಂಜೆ 4 ಗಂಟೆಗೆ ಶಂಕರ ಭಾರತಿ ಮಠದಿಂದ ಭಾವಚಿತ್ರ ಮೆರವಣಿಗೆ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮಹನೀಯರ ಭಾವಚಿತ್ರ ಮೆರವಣಿಗೆ, ಪೊಲೀಸ್ ಬಂದೋಬಸ್ತ್, ಕಲಾ ತಂಡಗಳ ನೇಮಕ, ಉಪನ್ಯಾಸಕರು, ಆಮಂತ್ರಣ ಪತ್ರಿಕೆ, ವೇದಿಕೆ, ಧ್ವನಿ-ಬೆಳಕು, ಆಸನ, ಕುಡಿಯುವ ನೀರು, ಉಪಾಹಾರ, ವ್ಯವಸ್ಥೆಯನ್ನು ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಮನ್ವಯದಿಂದ ಮಾಡಬೇಕೆಂದು ಸಲಹೆ ನೀಡಿದರು.
ಈ ಮಹನೀಯರ ಜಯಂತಿಯನ್ನು ಎಲ್ಲ ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಚರಣೆ ಮಾಡಲು ಆದೇಶ ಹೊರಡಿಸಲಾಗುವುದು ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು.