ಹಾವೇರಿ: ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ವಿವಿಧ ಪ್ರಮಾಣಪತ್ರಗಳ ಸೇವೆಗಳನ್ನು ತ್ವರಿತವಾಗಿ ಒದಗಿಸಿದ ಸಾಧನೆಗಾಗಿ ಹಾವೇರಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದೆ.
ಏಪ್ರಿಲ್-2026ರಲ್ಲಿ ಜಿಲ್ಲೆಯ ನಾಡಕಚೇರಿಗಳಲ್ಲಿ ಸ್ವೀಕರಿಸಲಾದ 25,964 ಅರ್ಜಿಗಳಲ್ಲಿ ಶೇ.99.97ರಷ್ಟು ಅರ್ಜಿಗಳನ್ನು ನಿಗದಿತ ಅವಧಿಗೂ ಮುನ್ನವೇ ವಿಲೇವಾರಿ ಮಾಡಲಾಗಿದೆ. ಜಿಲ್ಲೆ 6.84 ಸೇವಾ ಮೌಲ್ಯ ಹಾಗೂ 7.78 ವಿಲೇವಾರಿ ಸೂಚ್ಯಂಕದ ಆಧಾರದ ಮೇಲೆ ನಿಗದಿತ ಅವಧಿಗಿಂತ 8.78 ಪಟ್ಟು ವೇಗವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಿ ಈ ಸಾಧನೆ ದಾಖಲಿಸಿದೆ.
ಈ ಹಿನ್ನೆಲೆಯಲ್ಲಿ ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯವು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಅಭಿನಂದನಾ ಪತ್ರ ಕಳುಹಿಸಿದೆ. ಜಿಲ್ಲೆಯ ಈ ಸಾಧನೆಗೆ ಜಿಲ್ಲಾಧಿಕಾರಿಯವರ ಮಾರ್ಗದರ್ಶನ, ನಾಡಕಚೇರಿಗಳು ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರಗಳ ಸಿಬ್ಬಂದಿಯ ಕಾರ್ಯತತ್ಪರತೆ ಮತ್ತು ಜನಸ್ನೇಹಿ ಸೇವೆ ಕಾರಣವಾಗಿದೆ ಎಂದು ಪ್ರಸಂಶಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಕ್ಷಮತೆ ಹಾಗೂ ಜನಸೇವೆಯನ್ನು ಮುಂದುವರಿಸುವಂತೆ ನಿರ್ದೇಶನಾಲಯ ಆಶಯ ವ್ಯಕ್ತಪಡಿಸಿದೆ ಎಂದು ಡಿಸಿ ಕಚೇರಿ ಪ್ರಕಟಣೆ ತಿಳಿಸಿದೆ.