ಹಾವೇರಿ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಮೂರನೇ ವಾರ್ಷಿಕೋತ್ಸವ ಮತ್ತು ಗುರು ಪೂರ್ಣಿಮಾ ಮಹೋತ್ಸವ

Haveri, Ashwini Nagara, Shiradi SaiBaba, Madir, Guru Purnima,
Haveri, Ashwini Nagara, Shiradi SaiBaba, Madir, Guru Purnima,
Published on
ಹಾವೇರಿ: ಇಂದಿನ ಇಂಟರ್‌ನೆಟ್ ಕಾಲದಲ್ಲಿ ಮಕ್ಕಳಲ್ಲಿ ವಿದ್ಯೆ ಎಲ್ಲರಿಗೂ ಸಿಗುತ್ತಿದೆ. ಆದರೆ, ಗುಣ, ಸಂಸ್ಕಾರದ ಕೊರತೆ ಎಲ್ಲೆಡೆ ಕಂಡುಬರುತ್ತಿದೆ. ಗುಣ ಇಲ್ಲದಿದ್ದರೆ ಜೀವನ ಸಾರ್ಥಕವಾಗುವುದಿಲ್ಲ. ಹಾಗಾಗಿ, ವಿದ್ಯೆಯ ಜತೆಗೆ ಅಗತ್ಯವಾಗಿ ಗುಣಗಳು, ಸಂಸ್ಕಾರವನ್ನು ಕಲಿಸಿ ಎಂದು ಶಿರಹಟ್ಟಿ ಮತ್ತು ಬಾಲೆಹೊಸೂರಿನ ಭಾವೈಕ್ಯತಾ ಸಂಸ್ಥಾನ ಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಸ್ವಾಮೀಜಿ ಪಾಲಕರಿಗೆ ಕರೆ ನೀಡಿದರು.
ಇಲ್ಲಿನ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಮೂರನೇ ವಾರ್ಷಿಕೋತ್ಸವ ಮತ್ತು ಗುರು ಪೂರ್ಣಿಮಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಪಂಚದ ಪ್ರತಿಯೊಬ್ಬರಿಗೂ ಗುರು ಅನಿವಾರ್ಯ. ಹಿಂದೆ ಸಮರ್ಥವಾದ ಗುರು ಮತ್ತು ಮುಂದೆ ಗುರಿ ಇದ್ದ ವ್ಯಕ್ತಿ ಜೀವನದಲ್ಲಿ ಯಸಸ್ಸು ಕಾಣುತ್ತಾನೆ. ಗುರುಗಳಲ್ಲಿ ಎರಡು ಪ್ರಕಾರ. ಭೌತಿಕವಾದ ಸಂಪತ್ತು ಕೊಡುವ ಗುರು ಹಾಗೂ ಮಾನಸಿಕ ನೆಮ್ಮದಿ ಕೊಡುವ ಗುರು ಎಂದರು.
ಗುರುವಿನ ಮಾರ್ಗದರ್ಶನ ಇಲ್ಲದ ಕಾರಣ ಹತ್ತು ತಲೆ ಹೊಂದಿದ್ದ ರಾವಣ ರಾಮನ ಎದುರು ಸೋಲಬೇಕಾಯಿತು. ಶಿವಾಜಿ ಮಹಾರಾಜರು ಸಮರ್ಥ ರಾಮದಾಸರ ಮಾರ್ಗದರ್ಶನ ಹೊಂದಿದ್ದರು. ಅಲೆಕ್ಸಾಂಡರ್‌ಗೆ ಅರಿಸ್ಟಾಟಲ್ ಗುರುವಾಗಿದ್ದರು. ಯಾರು ಗುರುಗಳ ಮಾರ್ಗದರ್ಶನದಲ್ಲಿ ಸಾಗಿದ್ದಾರೋ ಅವರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಈ ದೇಶದಲ್ಲಿ ಅರಮನೆಯಿಂದ ಸಾಮಾನ್ಯ ಮನೆಗಳಿಗೂ ಒಂದೊಂದು ದೇವರು, ಮನೆಗೊಬ್ಬ ಗುರು ಇದ್ದರು. ಮಹಾರಾಜರಿಗೂ ಗುರುಗಳು ಶಿಕ್ಷೆ ಕೊಡುತ್ತಿದ್ದರು. ಈಗ ಹಲವರು ಅದನ್ನು ಮರೆತಿದ್ದಾರೆ. ಇಂದು ಭಕ್ತರ ಜತೆಗೆ ಗುರುಗಳೂ ಬದಲಾಗಿದ್ದಾರೆ. ವ್ಯಕ್ತಿಯ ಬೆಲೆ ಇದ್ದಾಗ ತಿಳಿಯುವುದಿಲ್ಲ. ಅವರು ಮರೆಯಾದ ಬಳಿಕವೇ ಅರ್ಥವಾಗುತ್ತದೆ. ತಂದೆ- ತಾಯಿ, ಗುರುಗಳು ಇದ್ದಾಗಲೇ ಅವರನ್ನು ಸಂತೋಷವಾಗಿ ಇಡಿ ಎಂದು ಕರೆ ನೀಡಿದರು.
‘ವಾಣಿಜ್ಯ ರತ್ನ’ ಪ್ರಶಸ್ತಿಗೆ ಆಯ್ಕೆಯಾದ ಉದ್ಯಮಿ, ದೇಗುಲ ಟ್ರಸ್ಟ್‌ನ ಉಪಾಧ್ಯಕ್ಷ ರಾಜಶೇಖರ ಮಾಗನೂರ ಅವರನ್ನು ಶ್ರೀಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಜಗದೀಶ ಬೆಟಗೇರಿ, ಕಾರ್ಯದರ್ಶಿ ವಿಜಯಕುಮಾರ ಗೊಡಚಿ, ಉಪಾಧ್ಯಕ್ಷ ಕೆ.ಸಿ.ಪಾವಲಿ, ಸಮಿತಿ ಟ್ರಸ್ಟಿಗಳು, ಸದಸ್ಯರು, ಭಜನಾ ಮಂಡಳಿ ಸದಸ್ಯರು, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಶಿಷ್ಯನ ಸಂಪತ್ತು ಅಪಹರಿಸುವ ಗುರು ಬೇಡ
ಗುರುಗಳು ಶಿಷ್ಯಂದಿರ ನೋವು ಅಪಹರಿಸಬೇಕು. ಆತನ ಸಂಪತ್ತು ಅಪಹರಿಸಬಾರದು. ನಮ್ಮ ಸಂಪತ್ತಿನ ಮೇಲೆ ಕಣ್ಣು ಹಾಕುವ ಗುರುಗಳನ್ನು ಆರಿಸುವ ಬದಲಿಗೆ ಜೀವನದ ದಾರಿ ತೋರಿಸುವ ಗುರುಗಳನ್ನು ಆರಿಸಬೇಕು. ವರ್ಷಕ್ಕೊಮ್ಮೆ ಗುರುಗಳ ದರ್ಶನ ಮಾಡಿದರೆ ಸಾಲದು. ನಿತ್ಯವೂ ಗುರುಗಳ ದರ್ಶನ, ಮಾರ್ಗದರ್ಶನ ಮುಖ್ಯ. ಜಾತಿ ಪ್ರಧಾನವಾದ ಗುರುಗಳಿಗಿಂತ ನೀತಿ ಪ್ರಧಾನವಾದ ಗುರುಗಳನ್ನು ಆರಿಸಿ ಎಂದು ದಿಂಗಾಲೇಶ್ವರ ಶ್ರೀಗಳು ಭಕ್ತರಿಗೆ ಸಲಹೆ ನೀಡಿದರು.
ಶ್ರೀ ಚೌಡೇಶ್ವರಿ ದೇಗುಲಕ್ಕೆ ಭೂಮಿ ಪೂಜೆ
ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ದಿಂಗಾಲೇಶ್ವರ ಶ್ರೀಗಳು ಶ್ರೀ ಚೌಡೇಶ್ವರಿ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಬೆಳಗ್ಗೆಯಿಂದ ಕಾಕಡಾರತಿ, ಕ್ಷೀರಾಭಿಷೇಕ, ಮಹಾಮಂಗಳಾರತಿ, ಸತ್ಯ ನಾರಾಯಣ ಪೂಜೆ, ನವಗ್ರಹ ಪೂಜೆ, ಗಣ ಹೋಮ, ದತ್ತಾತ್ರೇಯ ಹೋಮ, ರುದ್ರ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ, ಶ್ರೀ ಸಾಯಿಬಾಬಾರ ಪಾಲಿಕೆ ಉತ್ಸವ ಜರುಗಿತು. ಹುಬ್ಬಳ್ಳಿಯ ಜಯಪ್ರಿಯಾ ಆಸ್ಪತ್ರೆ ಹಾಗೂ ದೇಗುಲದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net