ಹೂವಿನ ಮಾರುಕಟ್ಟೆ ಸ್ಥಳಾಂತರಕ್ಕೆ ಒತ್ತಾಯ; ಹಾವೇರಿಯಲ್ಲಿ ವಾಹನ ಸವಾರರ ಪರದಾಟ; ಎಪಿಎಂಸಿಯಲ್ಲಿ ಪ್ರತ್ಯೇಕ ಸ್ಥಳಾವಕಾಶಕ್ಕೆ ಹೆಚ್ಚಿದ ಒತ್ತಡ

Haveri, APMC, Flower, Market,
Haveri, APMC, Flower, Market,
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಹೂವಿನ ಮಾರುಕಟ್ಟೆಗೆ ಪ್ರತ್ಯೇಕ ವ್ಯವಸ್ಥೆ ಇಲ್ಲ
  • ನಗರದ ಜಿಲ್ಲಾಸ್ಪತ್ರೆ ಎದುರು ಹಳೇ ಪಿಬಿ ರಸ್ತೆಯ ಬದಿಯಲ್ಲೇ ಹೂವಿನ ಮಾರುಕಟ್ಟೆ
  • ಹಬ್ಬ ಹರಿದಿನ ಬಂದರೂ ಜಿಲ್ಲಾಸ್ಪತ್ರೆ ಎದುರು ಹೂವಿನ ಮಾರುಕಟ್ಟೆ ಪ್ರದೇಶ ಜನಜಂಗುಳಿ
  • ಕೆಲವೊಮ್ಮೆ ಅಂಬುಲೆನ್ಸ್‌ಗಳಿಗೂ ದಾರಿ ಇಲ್ಲದಂಥ ಪರಿಸ್ಥಿತಿ
ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಎಪಿಎಂಸಿ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಇವುಗಳನ್ನೇ ಅವಲಂಬಿಸಿದ್ದಾರೆ. ಜವಳಿ ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ಉಸ್ತವಾರಿ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಏಜೆಂಟರ ಸಮಸ್ಯೆ, ರೈತರಿಗೆ ಮಾರಾಟಕ್ಕೆ ಅವ್ಯವಸ್ಥೆ, ಅಗತ್ಯವಾದ ಮಾಹಿತಿ ಕೊರತೆ, ಕುಡಿವ ನೀರು, ಶೌಚಗೃಹದ ಸಮಸ್ಯೆ ಸೇರಿ ಅನೇಕ ಅಡೆತಡೆಗಳಿವೆ. ಈ ಸಮಸ್ಯೆಗಳ ಕುರಿತು ಕನ್ನಡದ ನಂಬರ್ ಒನ್ ದಿನಪತ್ರಿಕೆ, ಕನ್ನಡಿಗರ ಧ್ವನಿ ‘ವಿಜಯವಾಣಿ’ ಇಂದಿನಿಂದ ಸರಣಿ ವರದಿ ಪ್ರಕಟಿಸಲಿದೆ.
ಕೇಶವಮೂರ್ತಿ ವಿ.ಬಿ. ಹಾವೇರಿ
ಯಾಲಕ್ಕಿ ಕಂಪಿನ ನಗರಿ, ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಹೂವಿನ ಮಾರುಕಟ್ಟೆಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಉದ್ಬವಿಸಿದೆ. ನಗರದ ಜಿಲ್ಲಾಸ್ಪತ್ರೆ ಎದುರು ಹಳೇ ಪಿಬಿ ರಸ್ತೆಯ ಬದಿಯಲ್ಲೇ ಹೂವಿನ ಮಾರುಕಟ್ಟೆ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು, ವಾಹನ ಸವಾರರರು ಪರದಾಡುವಂತಾಗಿದೆ.
ನಗರದ ಹಾನಗಲ್ಲ ರಸ್ತೆ ಹಾಗೂ ಗುತ್ತಲ ರಸ್ತೆಯಲ್ಲಿ ಎರಡು ಕಡೆ ಬೃಹತ್ ಎಪಿಎಂಸಿ ಪ್ರಾಂಗಣ ಇದ್ದರೂ ಹೂವು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಇಲ್ಲದಂತಾಗಿದೆ. ಸದ್ಯ ಜಿಲ್ಲಾಸ್ಪತ್ರೆ ಎದುರು ದರ್ಗಾ ಕಾಂಪ್ಲೆಕ್ಸ್‌ನಲ್ಲೇ ಹೂವಿನ ಮಾರುಕಟ್ಟೆ ನಡೆಯುತ್ತಿದೆ. ಹಾವೇರಿಯ ಎಪಿಎಂಸಿಯಲ್ಲಿ ಪ್ರಮುಖ ಸಮಸ್ಯೆ ಎಂದರೆ ಈ ಹೂವಿನ ಮಾರುಕಟ್ಟೆಯ ಸಮಸ್ಯೆ ಎನ್ನುವಂತಾಗಿದೆ.
ಗಣೇಶ ಚತುರ್ಥಿ, ದೀಪಾವಳಿ, ರಂಜಾನ್, ಶ್ರಾವಣ, ಅಮಾವಾಸ್ಯೆ, ಹುಣ್ಣಿಮೆ, ಯಾವುದೇ ಹಬ್ಬ ಹರಿದಿನ ಬಂದರೂ ಜಿಲ್ಲಾಸ್ಪತ್ರೆ ಎದುರು ಹೂವಿನ ಮಾರುಕಟ್ಟೆ ಪ್ರದೇಶ ಜನಜಂಗುಳಿಯಿಂದ ಕೂಡಿರುತ್ತದೆ. ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಗುರುವಾರ ಇದರ ಪಕ್ಕದಲ್ಲೇ ತರಕಾರಿ ಮಾರುಕಟ್ಟೆ ನಡೆಯುತ್ತದೆ. ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿರುತ್ತದೆ. ಜಿಲ್ಲಾಸ್ಪತ್ರೆ ಎದುರಿನ ರಸ್ತೆಯಾದ್ದರಿಂದ ಕೆಲವೊಮ್ಮೆ ಅಂಬುಲೆನ್ಸ್‌ಗಳಿಗೂ ದಾರಿ ಇಲ್ಲದಂಥ ಪರಿಸ್ಥಿತಿ ಕಂಡುಬರುತ್ತದೆ.
ಇಂತಹ ಸಂದರ್ಭದಲ್ಲಿ ವಾಹನಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸ ಪಡಬೇಕಾಗುತ್ತದೆ. ಪಾದಚಾರಿಗಳಿಗೂ ನೆಮ್ಮದಿಯಿಂದ ಓಡಾಡಲು ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಅಪಘಾತಗಳೂ ಆಗಿವೆ. ಜನ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗುತ್ತದೆ. ಹಾಗಾಗಿ, ಈ ಹೂವಿನ ಮಾರುಕಟ್ಟೆಯನ್ನು ರೈತರು ಹಾಗೂ ವ್ಯಾಪಾರಸ್ಥರ ಅನುಕೂಲಕ್ಕೆ ತಕ್ಕಂತೆ ಹಾನಗಲ್ಲ ರಸ್ತೆ ಅಥವಾ ಗುತ್ತಲ ರಸ್ತೆಯ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಬೇಕು. ಅಗತ್ಯ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.
ಇನ್ನದರೂ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕಿದೆ.
ತರಕಾರಿ ಮಾರಾಟಕ್ಕೆ 31 ಮಳಿಗೆ
ಹಾನಗಲ್ಲ ರಸ್ತೆಯ ಎಪಿಎಂಸಿಯಲ್ಲಿ 2022-23ರಲ್ಲಿ ನಿರ್ಮಿಸಿದ್ದ 39 ಮಳಿಗೆಗಳಲ್ಲಿ ತರಕಾರಿ ಮಾರುಕಟ್ಟೆ ಆರಂಭಿಸಲು ಸಿದ್ಧತೆ ನಡೆದಿದೆ. ಈಗಾಗಲೇ 31 ಮಳಿಗೆಗಳನ್ನು ಪ್ರತಿ ತಿಂಗಳ ಬಾಡಿಗೆಯಂತೆ ಹರಾಜು ನೀಡಲಾಗಿದೆ. ಬಾಕಿ 8 ಮಳಿಗೆ ವಾರದೊಳಗೆ ಪೂರ್ಣವಾಗಲಿದೆ. ಶೀಘ್ರದಲ್ಲೇ ತರಕಾರಿ ಮಾರುಕಟ್ಟೆ ಈ ಮಳಿಗೆಗಳಲ್ಲೇ ಆರಂಭವಾಗಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಗೋವಿಂದ ಕಬ್ಬೇರಹಳ್ಳಿ ತಿಳಿಸಿದ್ದಾರೆ.
ಆದಾಯ ಎಷ್ಟಿದೆ ?
ಹಾವೇರಿ ಎಪಿಎಂಸಿಯಿಂದ 2024ರಲ್ಲಿ ಬಳಕೆದಾರರ ಶುಲ್ಕ, ಮಾರುಕಟ್ಟೆ ಶುಲ್ಕ ಸೇರಿ 3.83 ಕೋಟಿ ರೂ. ಆದಾಯ ಆಕರಣೆಯಾಗಿದೆ. 2025ರ ಪ್ರಸಕ್ತ ವರ್ಷದಲ್ಲಿ ಅಕ್ಟೋಬರ್‌ವರೆಗೆ 86.75 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗದ ಪರಿಣಾಮ ಈ ವರ್ಷ ಇನ್ನೂ ಕಡಿಮೆ ಆದಾಯವಿದೆ ಎನ್ನುತ್ತವೆ ಮೂಲಗಳು.
"

ಹಾವೇರಿ ನಗರದ ಗುತ್ತಲ ರಸ್ತೆಯ ಎಪಿಎಂಸಿ ಆವರಣದಲ್ಲಿ 9 ಮಳಿಗೆಗಳಿವೆ. ಇಲ್ಲಿ ಹೂವಿನ ಮಾರುಕಟ್ಟೆ ಆರಂಭಿಸಲು ಸಿದ್ಧವಿದ್ದೇವೆ. ಇಲ್ಲಿ ಹೋಲ್‌ಸೇಲ್ ಖರೀದಿ ಮಾಡಿ, ಅಲ್ಲಿ ಮಾರಾಟ ಮಾಡಬಹುದು. ಸದ್ಯ ಶೌಚಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇದೆ. ವ್ಯಾಪಾರಸ್ಥರು ಬಂದರೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು.

"

ಈ ಹಿಂದೆ ನಾನು ಎಪಿಎಂಸಿ ಅಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ಹಾವೇರಿ ನಗರದ ಹಾನಗಲ್ಲ ರಸ್ತೆಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ತರಕಾರಿ ಹಾಗೂ ಹೂವಿನ ಮಾರುಕಟ್ಟೆಗಾಗಿ ಪ್ರತ್ಯೇಕ ಮಳಿಗೆಗಳನ್ನು ನಿರ್ಮಿಸಿ, ಅಲ್ಲಿಯೇ ಆರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು. ನಂತರ ಯಾವುದೋ ಕಾರಣಕ್ಕೆ ವಾಪಸಾದರು. ಸರ್ಕಾರ ಈ ಕೂಡಲೇ ಸ್ಥಳೀಯ ರೈತರು, ವ್ಯಾಪಾರಿಗಳು, ಸಂಬಂಧಪಟ್ಟವರ ಸಭೆ ಕರೆದು ಸೂಕ್ತ ಸ್ಥಳ ಆಯ್ಕೆ ಮಾಡಿ ಸಮಸ್ಯೆ ಬಗೆಹರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net