ಜುಲೈನಿಂದಾದರೂ ಸಿಗುತ್ತಾ ಪಡಿತರ ಜೋಳ ?; ದಕ್ಷಿಣ ಕರ್ನಾಟಕದಲ್ಲಿ ಮೇನಿಂದಲೇ ರಾಗಿ ವಿತರಣೆ; ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ

Haveri, Annabhagya, Ration, Jowar, Problem,
Haveri, Annabhagya, Ration, Jowar, Problem,
Published on
ಹಾವೇರಿ: ಅಂತ್ಯೋದಯ, ಬಿಪಿಎಲ್ ಕಾರ್ಡು ಹೊಂದಿರುವ ದಕ್ಷಿಣ ಕರ್ನಾಟಕದ ಫಲಾನುಭವಿಗಳಿಗೆ ಮೇ ತಿಂಗಳಿಂದಲೇ ಪಡಿತರ ಅಕ್ಕಿ ಜತೆಗೆ ರಾಗಿ ವಿತರಣೆ ಆರಂಭಿಸಿರುವ ರಾಜ್ಯ ಸರ್ಕಾರ, ಉತ್ತರ ಕರ್ನಾಟಕದ ಫಲಾನುಭವಿಗಳಿಗೆ ಈವರೆಗೆ ಜೋಳ ವಿತರಣೆ ಮಾಡಿಲ್ಲ.
ಈ ಮೂಲಕ ಪಡಿತರ ವಿತರಣೆಯಲ್ಲೂ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿರುವ ಸರ್ಕಾರ, ಜುಲೈನಿಂದಾದರೂ ಉತ್ತರ ಕರ್ನಾಟಕದ ಬಡವರಿಗೆ ಜೋಳ ವಿತರಿಸುತ್ತಾ ಎಂದು ಇಲ್ಲಿನ ಜನ ಕಾಯುತ್ತಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಪೌಷ್ಠಿಕ ಆಹಾರ ವಿತರಿಸುವ ಉದ್ದೇಶದಿಂದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯಹಾರಗಳ ಇಲಾಖೆ ಕೆಲ ವರ್ಷಗಳಿಂದ ಈಚೆಗೆ ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ಪಡಿತರ ಅಕ್ಕಿಯ ಜತೆಗೆ ಜೋಳ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ವರ್ಷದ ನಾಲ್ಕೈದು ತಿಂಗಳು ರಾಗಿ ವಿತರಿಸುತ್ತಿದೆ. ರೈತರಿಂದ ರಾಗಿ, ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ, ಫಲಾನುಭವಿಗಳಿಗೆ ವಿತರಿಸುತ್ತದೆ.
ಕಳೆದ ವರ್ಷ ಜೂನ್‌ನಿಂದ ಉತ್ತರ ಕರ್ನಾಟಕದಲ್ಲಿ 8 ಕೆಜಿ ಅಕ್ಕಿ ಜತೆಗೆ 2 ಕೆಜಿ ಜೋಳ ವಿತರಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿತ್ತು. ಈ ವರ್ಷ ದಕ್ಷಿಣದಲ್ಲಿ ಮೇನಿಂದಲೇ ರಾಗಿ ವಿತರಿಸುತ್ತಿದೆ. ಆದರೆ, ಉತ್ತರ ಭಾಗದಲ್ಲಿ ಜೂನ್ ಕಳೆದರೂ ಈವರೆಗೆ ಜೋಳ ವಿತರಿಸಿಲ್ಲ. ಜುಲೈನಿಂದ ಜೋಳ ವಿತರಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆಯಾದರೂ, ಈ ಬಗ್ಗೆ ಖಚಿತತೆ ಇಲ್ಲ. ಹಾಗಾಗಿ, ಕಾರಣ ಹೇಳದೇ ಜುಲೈನಿಂದ ತಪ್ಪದೇ ಅಕ್ಕಿಯ ಜತೆಗೆ ಜೋಳ ವಿತರಿಸಬೇಕು ಎಂಬುದು ಉತ್ತರ ಕರ್ನಾಟಕ ಭಾಗದ ಜನರ ಆಗ್ರಹವಾಗಿದೆ.
ರಾಗಿ ಬೆಳೆ ಹೆಚ್ಚು, ಜೋಳ ಕ್ಷೇತ್ರ ಕಡಿಮೆ
ಮೈಸೂರು, ಹಾನಸ, ಮಂಡ್ಯ, ಸೇರಿದಂತೆ ದಕ್ಷಿಣದ ಹಲವು ಜಿಲ್ಲೆಗಳಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ವಿಜಯಪುರ, ಕಲಬುರಗಿ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜೋಳ ಬೆಳೆಯಲಾಗುತ್ತದೆ. ದಕ್ಷಿಣದಲ್ಲಿ ನೀರಾವರಿ ಸೌಲಭ್ಯ ಹೆಚ್ಚಾಗಿರುವ ಕಾರಣ ರಾಗಿ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ನೀರಾವರಿ ಸೌಲಭ್ಯ ಕಡಿಮೆ ಇದ್ದು ಮಳೆಯಾಧಾರಿತ ಒಣ ಬೇಸಾಯವಿದೆ. ಆದ್ದರಿಂದ ಜೋಳ ಬೆಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಹಾವೇರಿ ಜಿಲ್ಲೆಯ ಜೋಳ ಖರೀದಿ ಕೇಂದ್ರಗಳಲ್ಲಿ 1 ಲಕ್ಷ ಕ್ವಿಂಟಾಲ್ ಜೋಳ ಖರೀದಿಗಾಗಿ ರೈತರು ನೋಂದಾಯಿಸಿದ್ದರು. ಆದರೆ, ಕೇವಲ 50 ಸಾವಿರ ಕ್ವಿಂಟಾಲ್ ಮಾತ್ರ ಸಂಗ್ರಹಣೆಯಾಗಿದೆ. ಇದು ಪಡಿತರ ವಿತರಣೆಯ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ, ಈ ವರ್ಷ ಜೋಳ ಸಂಗ್ರಹಣೆಯೂ ಕಡಿಮೆಯಾಗಿದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಯೊಬ್ಬರು.
ಕಳಪೆ ಜೋಳಕ್ಕೆ ಬ್ರೇಕ್ ಹಾಕಿ
2024ರಲ್ಲಿ ಮೂರು ತಿಂಗಳ ಕಾಲ ಅತ್ಯಂತ ಕಳಪೆ ಗುಣಮಟ್ಟದ ಜೋಳ ವಿತರಿಸಲಾಗಿತ್ತು. ಗದಗ ಜಿಲ್ಲೆಯ ಅಧಿಕಾರಿಗಳು ತಿರಸ್ಕರಿಸಿದ್ದ ಬಳ್ಳಾರಿಯ ಕಳಪೆ ಜೋಳವನ್ನು ಹಾವೇರಿ ಜಿಲ್ಲೆಯ ಅಂದಿನ ಆಹಾರ ಇಲಾಖೆ ಅಧಿಕಾರಿಗಳು ಸ್ವೀಕರಿಸಿದ್ದರು. ಈ ಮೂಲಕ ಕಸ, ಕಡ್ಡಿ, ಹುಳಗಳು ಹಾಗೂ ಹಿಟ್ಟಿನಿಂದ ಕೂಡದ ಕಳಪೆ ಜೋಳ ವಿತರಿಸಲಾಗಿತ್ತು. ಇದಕ್ಕೆ ಜನಾಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ‘ವಿಜಯವಾಣಿ’ ಸರಣಿ ವರದಿ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಈ ವಿಚಾರ ಸದನದಲ್ಲೂ ಚರ್ಚೆಯಾಗಿತ್ತು. ಪರಿಣಾಮ 2025ರಲ್ಲಿ ಉತ್ತಮ ಗುಣಮಟ್ಟದ ಜೋಳ ವಿತರಿಸಲಾಗಿತ್ತು.
1.17 ಕೋಟಿ ಬಿಪಿಎಲ್ ಕಾರ್ಡ್
ರಾಜ್ಯದಲ್ಲಿ ಸುಮಾರು 1,17,37,344 ಬಿಪಿಎಲ್ ಕಾರ್ಡ್‌ಗಳಿದ್ದು, 4,08,96,048 ಫಲಾನುಭವಿಗಳಿದ್ದಾರೆ. 10,77,426 ಅಂತ್ಯೋದಯ ಕಾರ್ಡ್‌ಗಳಿದ್ದು, 43,95,102 ಫಲಾನುಭವಿಗಳಿದ್ದಾರೆ. ಉ.ಕ. ಭಾಗದಲ್ಲಿ ತಿಂಗಳಿಗೆ 5 ಲಕ್ಷ ಕ್ವಿಂಟಾಲ್ ಜೋಳ ಬೇಕಾಗುತ್ತದೆ. ಸದ್ಯ ರಾಜ್ಯದಲ್ಲಿ 15 ಲಕ್ಷ ಕ್ವಿಂಟಾಲ್ ಮಾತ್ರ ಸಂಗ್ರಹಣೆಯಾಗಿದ್ದು, ಮೂರು ತಿಂಗಳು ಮಾತ್ರ ವಿತರಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
"

ಬಳ್ಳಾರಿ ಜಿಲ್ಲೆಯಿಂದ ಹಾವೇರಿ ಜಿಲ್ಲೆಗೆ ಒಂದು ತಿಂಗಳಿಗೆ ಸಾಕಾಗುವಷ್ಟು 45,000 ಕ್ವಿಂಟಾಲ್ ಜೋಳ ಸರಬರಾಜಿಗೆ ಆಹಾರ ಇಲಾಖೆ ಆದೇಶಿಸಿದೆ. ಆಯಾ ತಾಲೂಕಿನ ಗೋದಾಮುಗಳಿಗೆ ಶೀಘ್ರದಲ್ಲೇ ಜೋಳ ಸರಬರಾಜು ಆಗಲಿದ್ದು, ಜುಲೈನಿಂದ ಜೋಳ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು.

— ಮಂಜುನಾಥ ಡಿ.ಜೆ., ಉಪ ನಿರ್ದೇಶಕ, ಆಹಾರ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net