ಬಾಡಿಗೆ ಕಟ್ಟಡದಲ್ಲಿ 329 ಅಂಗನವಾಡಿಗಳು; ಶಾಲೆ, ಸಮುದಾಯ ಭವನದಲ್ಲಿ 167 ಕೇಂದ್ರಗಳು; ದುರಸ್ಥಿಗೆ ಕಾದಿವೆ ಹಲವು ಸ್ವಂತ ಕೊಠಡಿಗಳು

Haveri, Anganawadi, Problems, Rent, Buildings,
Haveri, Anganawadi, Problems, Rent, Buildings,
Published on
ಹಾವೇರಿ: ಹಾವೇರಿ ಜಿಲ್ಲೆಯಾಗಿ 27 ಗತಿಸಿದರೂ ಈವರೆಗೆ ಎಲ್ಲ ಅಂಗನವಾಡಿಗಳಿಗೆ ಸ್ವಂತ ಹಾಗೂ ಸುಸಜ್ಜಿತ ಕಟ್ಟಡಗಳ ವ್ಯವಸ್ಥೆ ಮಾಡಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಜಿಲೆಯ ಒಟ್ಟಾರೆ 1,991 ಅಂಗನವಾಡಿ ಕೇಂದ್ರಗಳ ಪೈಕಿ 329 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, 167 ಕೇಂದ್ರಗಳು ಸರ್ಕಾರಿ ಶಾಲೆಗಳು, ಗ್ರಾಮ ಪಂಚಾಯ್ತಿಗಳ ಕಟ್ಟಡ, ಸಮುದಾಯ ಭವನಗಳಲ್ಲಿ ನಡೆಯುತ್ತಿವೆ.
ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಒಟ್ಟು 1,991 ಅಂಗನವಾಡಿಗಳು ಚಾಲ್ತಿಯಲ್ಲಿವೆ. ಇದರಲ್ಲಿ 1,668 ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಹಾಗೂ 323 ಕೇಂದ್ರಗಳು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಗ್ರಾಮೀಣ ಭಾಗದ 1,350 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, ನಗರ ವ್ಯಾಪ್ತಿಯ 145 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಗ್ರಾಮೀಣ ವ್ಯಾಪ್ತಿಯ 59 ಹಾಗೂ ನಗರಗಳ 8 ಕೇಂದ್ರ ಸೇರಿ 67 ಅಂಗನವಾಡಿಗಳು ಸ್ಥಳೀಯ ಸರ್ಕಾರ ಶಾಲಾ ಕಟ್ಟಡದಲ್ಲಿ ನಡೆಯುತ್ತಿವೆ.
ಗ್ರಾಮೀಣ ಭಾಗದ 90 ಹಾಗೂ ನಗರಗಳ 10 ಕೇಂದ್ರಗಳು ಗ್ರಾಮ ಪಂಚಾಯ್ತಿ, ಸಮುದಾಯ ಭವನ, ಯುವಕ ಮಂಡಳ, ಮಹಿಳಾ ಮಂಡಳ, ಇನ್ನಿತರ ಕಟ್ಟಡಗಳಲ್ಲಿ ಆಶ್ರಯ ಪಡೆದಿವೆ. ಗ್ರಾಮೀಣ ಭಾಗದ 169 ಹಾಗೂ ನಗರಗಳ 160 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ 100 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದ್ದು, ಮೂಲ ಸೌಕರ್ಯಗಳಿಂದ ಹಲವು ಅಂಗನವಾಡಿಗಳು ವಂಚಿತವಾಗಿವೆ.
ಸೂಕ್ತ ಕಟ್ಟಡ ಇಲ್ಲದ ಅನೇಕ ಅಂಗನವಾಡಿಗಳು ಜಿಲ್ಲೆಯಲ್ಲಿವೆ. ಸ್ವಂತ ಕಟ್ಟಡಗಳು ಇದ್ದರೂ ಕೆಲ ಅಂಗನವಾಡಿಗಳು ಸೂಕ್ತ ಸ್ಥಳದಲ್ಲಿ, ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪುಟಾಣಿ ಮಕ್ಕಳು, ಪಾಲಕರು ಪರದಾಡುವಂತಾಗಿದೆ. ಹಾಗಾಗಿ, ಸರ್ಕಾರ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಜರುಗಿಸಬೇಕಿದೆ.
ಮಕ್ಕಳು, ಗರ್ಭಿಣಿಯರ ಸಂಖ್ಯೆ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 6 ತಿಂಗಳಿಂದ 3 ವರ್ಷದವರೆಗಿನ 55,640 ಮಕ್ಕಳು ಹಾಗೂ 3ರಿಂದ 6 ವರ್ಷದ ಒಳಗಿನ 46,344 ಮಕ್ಕಳು ಅಂಗನವಾಡಿಗಳಿಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 12,792 ಗರ್ಭಿಣಿಯರು ಹಾಗೂ 11,968 ಬಾಣಂತಿಯರ ಹೆಸರು ಅಂಗನವಾಡಿಗಳಲ್ಲಿ ನೋಂದಣಿಯಾಗಿದೆ. 1,957 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1,930 ಅಂಗನವಾಡಿ ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ.

33 ಹೊಸ ಕೊಠಡಿ ನಿರ್ಮಾಣ
2025-26ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ 33 ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಐಸಿಡಿಎಸ್, ನರೇಗಾ ಯೋಜನೆಯಡಿ 18 ಅಂಗನವಾಡಿ ಕಟ್ಟಡ, ಶಾಸನಬದ್ಧ ಯೋಜನೆಯಡಿ 11 ಹಾಗೂ ನಗರ ಪ್ರದೇಶದಲ್ಲಿ ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿ 4 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ಪಂಚಾಯತ್ ರಾಜ್ ಇಲಾಖೆಯಿಂದ ಕಾಮಗಾರಿ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.
ನ್ಯಾಯಾಧೀಶರಿಂದ ವರದಿ ಸಲ್ಲಿಕೆ
2024ರಲ್ಲಿ ಅಂದಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ.ಸದಾನಂದಸ್ವಾಮಿ ನೇತೃತ್ವದ ತಂಡ ಜಿಲ್ಲೆಯ ಹಲವು ಅಂಗನವಾಡಿಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಕುರಿತು ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಬಹುತೇಕ ಅಂಗನವಾಡಿಗಳಲ್ಲಿನ ಮೂಲ ಸೌಕರ್ಯದ ಕೊರತೆ ಹಾಗೂ ನೂನ್ಯತೆಗಳ ಕುರಿತು ಈ ತಂಡ ಬೆಳಕು ಚೆಲ್ಲಿತ್ತು. ಆದರೆ, ಈ ವರದಿಯನ್ನು ಸರ್ಕಾರ ಹೇಗೆ ಸ್ವೀಕರಿಸಿತು ? ಅದಕ್ಕೆ ಯಾವ ಯಾವ ಕ್ರಮ ಕೈಗೊಂಡಿತು ? ಎಂಬ ಕುರಿತು ಈವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
"

ಜಿಲ್ಲೆಯಲ್ಲಿ 1,495 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದೆ. 329 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಇವುಗಳಿಗೆ ನಿವೇಶನ ಹಾಗೂ ಸ್ವಂತ ಕಟ್ಟಡಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

— ರೇವತಿ ಹೊಸಮಠ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net